ಪಾಕಿಸ್ತಾನ ಧ್ವಜ
ಪೆಶಾವರ: ದೇಶದಲ್ಲಿರುವ ಅಫ್ಗಾನಿಸ್ತಾನ ನಿರಾಶ್ರಿತರು ಹಾಗೂ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಗೆ ತಾವಾಗಿಯೇ ದೇಶ ತೊರೆಯುವಂತೆ ಪಾಕಿಸ್ತಾನ ಬುಧವಾರ ಎಚ್ಚರಿಕೆ ನೀಡಿದೆ.
'ತಮ್ಮ ದೇಶಗಳಿಗೆ ತೆರಳುತ್ತಿರುವವರಿಗೆ ಗೌರವಯುತ ಸತ್ಕಾರ ಖಾತ್ರಿಪಡಿಸಲಾಗುತ್ತಿದೆ' ಎಂಬುದಾಗಿ ಆಂತರಿಕ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ಮುಖ್ಯವಾಗಿ ಮಹಿಳೆಯರು, ಮಕ್ಕಳು ಹಾಗೂ ವಯಸ್ಸಾದವರಿಗೆ ವೈದ್ಯಕೀಯ, ಆಹಾರ ಸೌಲಭ್ಯಗಳನ್ನು ವಿಶೇಷವಾಗಿ ಕಲ್ಪಿಸಲಾಗುವುದು ಎಂದೂ ಅದರಲ್ಲಿ ಉಲ್ಲೇಖಿಸಿದೆ.
ಅಕ್ರಮವಾಗಿ ನೆಲೆಸಿರುವ ಎಲ್ಲಾ ವಿದೇಶಿಯರು ಹಾಗೂ ಅಫ್ಗನ್ ನಾಗರಿಕ ಕಾರ್ಡ್ (ಎಸಿಸಿ) ಹೊಂದಿರುವವರು ಮಾರ್ಚ್ 31ರೊಳಗೆ ಪಾಕಿಸ್ತಾನ ತೊರೆಯಬೇಕು. ಇಲ್ಲದಿದ್ದರೆ ಏಪ್ರಿಲ್ 1ರಂದು ಗಡೀಪಾರು ಆರಂಭಿಸಲಾಗುವುದು ಎಂದು ಸಚಿವಾಲಯವು ಈ ವರ್ಷದ ಆರಂಭದಲ್ಲೇ ಎಚ್ಚರಿಸಿತ್ತು.
ಎಸಿಸಿ ಎಂಬುದು ಅಫ್ಗಾನ್ ನಿರಾಶ್ರಿತರಿಗೆ ತಾತ್ಕಾಲಿಕ ಕಾನೂನು ಸ್ಥಾನಮಾನ ಕಲ್ಪಿಸುವ ಸಲುವಾಗಿ 2017ರಲ್ಲಿ ಆರಂಭಿಸಲಾದ ತಾತ್ಕಾಲಿಕ ದಾಖಲೆಯಾಗಿದೆ.
ಸದ್ಯ ದೇಶದ ಎಲ್ಲ ಭಾಗಗಳಲ್ಲೂ ಅಫ್ಗಾನ್ ನಾಗರಿಕರನ್ನು ಗಡೀಪಾರು ಮಾಡುವ ಕಾರ್ಯವನ್ನು ಅಧಿಕಾರಿಗಳು ಆರಂಭಿಸಿದ್ದಾರೆ.
ಅಕ್ರಮ ವಿದೇಶಿಯರ ವಾಪಸಾತಿ ಕಾರ್ಯಕ್ರಮ (ಐಎಫ್‌ಆರ್‌ಪಿ) 2025ರ ಏಪ್ರಿಲ್ 1ರಂದು ಆರಂಭವಾದಾಗಿನಿಂದ ಈವರೆಗೆ ಒಟ್ಟು 11.02 ಲಕ್ಷ (11,02,441) ವಿದೇಶಿಯರನ್ನು ಹೊರಹಾಕಲಾಗಿದೆ ಎಂದು ಸಚಿವಾಲಯದ ಹೇಳಿಕೆಯಿಂದ ತಿಳಿದುಬಂದಿದೆ.
ಅಕ್ರಮ ವಿದೇಶಿಯರಿಗೆ ಉದ್ಯೋಗ ನೀಡುವುದು, ಮನೆಗಳಲ್ಲಿ ಅಥವಾ ಹೋಟೆಲ್‌ಗಳಲ್ಲಿ ಬಾಡಿಗೆಗೆ ವಸತಿ ಒದಗಿಸುವವರು ಅಥವಾ ಅವರೊಂದಿಗೆ ವ್ಯವಹಾರ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ.
ಅಂದಾಜು 30 ಲಕ್ಷ ಅಫ್ಗನ್ ನಿರಾಶ್ರಿತರು ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಅವರಲ್ಲಿ ಸುಮಾರು 8.13 ಲಕ್ಷ ಮಂದಿ ಎಸಿಸಿ ಕಾರ್ಡ್‌ಗಳನ್ನು ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2023ರ ನವೆಂಬರ್ ಬಳಿಕ ಸುಮಾರು 13 ಲಕ್ಷ ಅಫ್ಗನ್ ನಿರಾಶ್ರಿತರನ್ನು ಪಾಕ್ ಹೊರಗಟ್ಟಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.