ಲಂಡನ್: ಅಮೆರಿಕದ ತೀವ್ರ ವಿರೋಧದ ಮಧ್ಯೆಯೂ ಬ್ರಿಟನ್ ಸರ್ಕಾರವು ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಮುಂದಾಗಿದೆ. ಗಾಜಾದಲ್ಲಿ ನಡೆಸುತ್ತಿರುವ ಯುದ್ಧ ಸಂಬಂಧ ಇಸ್ರೇಲ್‌ಗೆ ಬ್ರಿಟನ್ ಸರ್ಕಾರವು ಕೆಲವು ನಿಬಂಧನೆಗಳನ್ನು ಹಾಕಿತ್ತು. ಇದನ್ನು ಪಾಲಿಸಿಲ್ಲ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬ್ರಿಟನ್ ಮುಂದಾಗಿದೆ.
ಸೋಮವಾರದಿಂದ (ಸೆ. 22) ವಿಶ್ವಸಂಸ್ಥೆಯ 80ನೇ ಸಾಮಾನ್ಯ ಸಭೆ ಆರಂಭವಾಗಲಿದೆ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧ, ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ.
ಸೋಮವಾರಕ್ಕೂ ಮುನ್ನ ಬ್ರಿಟನ್, ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ, ಪೋರ್ಚುಗಲ್ ಸೇರಿದಂತೆ ಸುಮಾರು 140 ದೇಶಗಳು ಪ್ಯಾಲೆಸ್ಟೀನ್ ಅನ್ನು ಪ್ರತ್ಯೇಕ ದೇಶವನ್ನಾಗಿ ಪರಿಗಣಿಸಲು ಮುಂದಾಗಿವೆ.
‘ಇದೊಂದು ಸಾಂಕೇತಿಕವಾದ ನಡೆಯಾಗಲಿದೆಯಾದರೂ ಯುದ್ಧ ನಿಲ್ಲಿಸಲು ಇಸ್ರೇಲ್ ಮೇಲೆ ಈ ನಿರ್ಧಾರವು ರಾಜತಾಂತ್ರಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಬಹುದು, ಇದರಿಂದ ಗಾಜಾದಲ್ಲಿ ಶಾಂತಿ ನೆಲಸಬಹುದು’ ಎಂದು ಬ್ರಿಟನ್ ಆಶಿಸಿದೆ. ಫ್ರಾನ್ಸ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಈ ನಿರ್ಧಾರವನ್ನು ಇಸ್ರೇಲ್‌ನಲ್ಲಿರುವ ಶಾಂತಿಪರ ಹೋರಾಟಗಾರರು ಸ್ವಾಗತಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಗಾಜಾ ನಗರದಲ್ಲಿ ಇಸ್ರೇಲ್ ತನ್ನ ದಾಳಿಯನ್ನು ಮುಂದುವರಿಸಿದ್ದು, ಶನಿವಾರ ನಡೆಸಿದ ದಾಳಿಯಲ್ಲಿ ಮಕ್ಕಳೂ ಸೇರಿ ಒಟ್ಟು 34 ಮಂದಿ ಮೃತಪಟ್ಟಿದ್ದಾರೆ.
ಅಬ್ಬಾಸ್‌ಗೆ ವೀಸಾ ನಿರಾಕರಣೆ
ನ್ಯೂಯಾರ್ಕ್‌ನಲ್ಲಿನ ವಿಶ್ವ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಪ್ಯಾಲೆಸ್ಟೀನ್ ಪ್ರಾಧಿಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಹಾಗೂ ಅವರ ತಂಡಕ್ಕೆ ವೀಸಾ ನೀಡಲು ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರ ನಿರಾಕರಿಸಿದೆ. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ವೀಸಾ ನಿರಾಕರಿಸಲಾಗಿದೆ. ಈ ಬೆಳವಣಿಗೆ ಬಳಿಕ ಮೊದಲೇ ಚಿತ್ರೀಕರಿಸಿದ ವಿಡಿಯೊವನ್ನು ಪ್ರಸಾರ ಮಾಡಲು ಅನುಮತಿ ನೀಡುವ ನಿರ್ಣಯವನ್ನು ವಿಶ್ವಸಂಸ್ಥೆ ಮುಂದಿಟ್ಟಿತ್ತು. ಇದಕ್ಕೆ ಭಾರತವೂ ಸೇರಿ ಹಲವು ದೇಶಗಳು ಒಪ್ಪಿಗೆ ನೀಡಿವೆ. ಸೆ.25ರಂದು ಅಬ್ಬಾಸ್ ಅವರ ವಿಡಿಯೊ ಪ್ರಸಾರವಾಗಲಿದೆ.
ಇಸ್ರೇಲ್ ಒತ್ತೆಯಾಳುಗಳು ಬೀಳ್ಕೊಡುಗೆ ಚಿತ್ರಗಳ ಬಿಡುಗಡೆ
ತಮ್ಮ ಬಳಿ ಉಳಿದಿರುವ 47 ಇಸ್ರೇಲ್ ಒತ್ತೆಯಾಳುಗಳ ಫೋಟೊಗಳಿರುವ ಪೋಸ್ಟರ್‌ವೊಂದನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಹಮಾಸ್ ಬಂಡುಕೋರರು ಅದರಲ್ಲಿ ‘ಬೀಳ್ಕೊಡುಗೆಯ ಚಿತ್ರಗಳು’ ಎಂದು ಬರೆದಿದ್ದಾರೆ. ‘ಗಾಜಾ ನಗರದ ಮೇಲೆ ಇಸ್ರೇಲ್ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ದಾಳಿಯು ಹೀಗೆಯೇ ಮುಂದುವರಿದರೆ ನಿಮ್ಮವರಿಗೆ ತೊಂದರೆ’ ಎಂಬ ಎಚ್ಚರಿಕೆಯನ್ನೂ ಹಮಾಸ್ ನೀಡಿದೆ. ಪೋಸ್ಟರ್‌ನಲ್ಲಿರುವ ಎಲ್ಲ ಒತ್ತೆಯಾಳುಗಳ ಚಿತ್ರಗಳಿಗೆ ‘ರಾನ್ ಅರಾದ್’ ಹೆಸರನ್ನು ನೀಡಿ ಕ್ರಮಸಂಖ್ಯೆಯನ್ನೂ ನೀಡಲಾಗಿದೆ. 1986ರಲ್ಲಿ ಇಸ್ರೇಲ್‌ನ ವಾಯು ಪಡೆಯ ರಾನ್ ಅವರು ಕಾಣೆಯಾಗಿದ್ದರು. ಹಮಾಸ್ ಬಂಡುಕೋರರೇ ರಾನ್ ಅವರನ್ನು ಹತ್ಯೆ ಮಾಡಿದ್ದರು ಎಂದು ಬಳಿಕ ತಿಳಿದು ಬಂದಿತ್ತು. ‘ರಾನ್ ಅವರಿಗೆ ಆದ ಗತಿಯೇ ಈ ಒತ್ತೆಯಾಳುಗಳಿಗೂ ಆಗಲಿದೆ’ ಎಂದು ಹಮಾಸ್ ಹೇಳಿದೆ. ‘ನೆತನ್ಯಾಹು ಅವರ ಹಠಮಾರಿತನ ಮತ್ತು ಈತನ ಎದುರು ಸೇನಾ ಮುಖ್ಯಸ್ಥನ ಶರಣಾಗತಿಯ ಕಾರಣದಿಂದಲೇ ಬೀಳ್ಕೊಡುಗೆ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಇದು ಗಾಜಾದ ಕಾರ್ಯಾಚರಣೆಯ ಆರಂಭ. ನಿಮಗೆ ಈ ಒತ್ತೆಯಾಳುಗಳು ಜೀವಂತವಾಗಿಯೂ ಇವರ ಮೃತದೇಹವೂ ಸಿಗುವುದಿಲ್ಲ’ ಎಂದು ಹಮಾಸ್ ಬರೆದುಕೊಂಡಿದೆ. 47 ಜನರ ಪೈಕಿ 25 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.