ವಾಷಿಂಗ್ಟನ್: ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಹೆಚ್ಚುವರಿ ನ್ಯಾಷನಲ್ ಗಾರ್ಡ್ಸ್ ಸಿಬ್ಬಂದಿ ನಗರಕ್ಕೆ ಆಗಮಿಸುವವರೆಗೆ, ಅಮೆರಿಕದ ಸೇನೆಯು ನೌಕಾಪಡೆಯ 700 ತುಕಡಿಗಳನ್ನು ನಿಯೋಜಿಸಲಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ವಲಸೆ ಅಧಿಕಾರಿಗಳು ಕೈಗೊಂಡಿರುವ ಶೋಧ ಕಾರ್ಯಾಚರಣೆ ವಿರೋಧಿಸಿ ಲಾಸ್ ಏಂಜಲೀಸ್‌ನಲ್ಲಿ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನೆಗಳನ್ನು ಹತ್ತಿಕ್ಕಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಭಾನುವಾರ ಲಾಸ್ ಏಂಜಲೀಸ್‌ನ ಬೀದಿಗಳಲ್ಲಿ ಸುಮಾರು 300 ನ್ಯಾಷನಲ್ ಗಾರ್ಡ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ನ್ಯಾಷನಲ್ ಗಾರ್ಡ್ಸ್‌ನ ಸಿಬ್ಬಂದಿಯನ್ನು ನಿಯೋಜಿಸುವ ಟ್ರಂಪ್ ಅವರ ನಿರ್ಧಾರವನ್ನು ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಟೀಕಿಸಿದ್ದು, ಕಾನೂನುಬಾಹಿರ ಎಂದು ಕರೆದಿದ್ದಾರೆ. ‘ಉದ್ದೇಶ ಪೂರ್ವಕವಾಗಿ ಪ್ರಚೋದನೆ ಉಂಟುಮಾಡುವ ಕ್ರಮ’ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮಲ್ಲಿ ಭದ್ರತಾ ಸಿಬ್ಬಂದಿಯ ಕೊರತೆಯಿಲ್ಲ. ಟ್ರಂಪ್ ಅವರು ಪ್ರಚಾರವನ್ನು ಬಯಸುತ್ತಾರೆ ಎಂದು ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡಲು ನ್ಯಾಷನಲ್ ಗಾರ್ಡ್ಸ್‌ನ 2 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಸರ್ಕಾರ ತಿಳಿಸಿದೆ.
ಬುಧವಾರದ ವೇಳೆಗೆ ಹೆಚ್ಚುವರಿ ನ್ಯಾಷನಲ್ ಗಾರ್ಡ್ಸ್ ಸಿಬ್ಬಂದಿಯನ್ನು ನಿಯೋಜಿಸುವ ನಿರೀಕ್ಷೆಯಿದೆ. ಅಲ್ಲಿಯವರೆಗೆ, ನೌಕಾಪಡೆ ಸಹಕಾರ ನೀಡಲಿದೆ ಎಂದು ಹೆಸರು ಹೇಳಲು ಇಚ್ಚಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಲಸೆ ಮತ್ತು ಕಸ್ಟಮ್ಸ್ ಅಧಿಕಾರಿಗಳು ಲಾಸ್ ಏಂಜಲೀಸ್ ನಗರದ ವಿವಿಧ ಭಾಗಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ವಲಸೆ ನೀತಿ ಉಲ್ಲಂಘಿಸಿದ ಆರೋಪದಲ್ಲಿ 44 ಮಂದಿಯನ್ನು ಶುಕ್ರವಾರ ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಪ್ರತಿಭಟನೆ ಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.