ADVERTISEMENT

PM Modi US Visit: ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ

ಕೊರೆವ ಚಳಿ ಲೆಕ್ಕಿಸದೇ ಮೋದಿ ಸ್ವಾಗತಿಸಲು ಸೇರಿದ್ದ ಭಾರತೀಯ ಸಮುದಾಯದವರು

ಪಿಟಿಐ
Published 13 ಫೆಬ್ರುವರಿ 2025, 1:55 IST
Last Updated 13 ಫೆಬ್ರುವರಿ 2025, 1:55 IST
<div class="paragraphs"><p>ನರೇಂದ್ರ ಮೋದಿ ಅಮೆರಿಕ ಪ್ರವಾಸ</p></div>

ನರೇಂದ್ರ ಮೋದಿ ಅಮೆರಿಕ ಪ್ರವಾಸ

   

(ಚಿತ್ರ ಕೃಪೆ: X@narendramodi)

ವಾಷಿಂಗ್ಟನ್‌: ಫ್ರಾನ್ಸ್‌ ಪ್ರವಾಸದ ಬಳಿಕ ಅಮೆರಿಕಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ವಾಷಿಂಗ್ಟನ್‌ಗೆ ಬಂದಿಳಿದರು. ಅಲ್ಲಿ ಅವರಿಗೆ ಭಾರತೀಯ ಸಮುದಾಯದವರಿಂದ ಭವ್ಯ ಸ್ವಾಗತ ದೊರೆಯಿತು.

ADVERTISEMENT

ಅಮೆರಿಕ ಅಧ್ಯಕ್ಷರ ಅತಿಥಿ ಗೃಹ ‘ಬ್ಲೇರ್ ಹೌಸ್‌’ನಲ್ಲಿ ಪ್ರಧಾನಿ ಮೋದಿ ಅವರಿಗೆ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿ ಮಾಡಲಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

‌ಕೊರೆಯುವ ಚಳಿ ನಡುವೆಯೂ ಭಾರತೀಯ ಸಮುದಾಯದ ಹಲವರು ಅತಿಥಿ ಗೃಹದ ಬಳಿ ಜಮಾಯಿಸಿ, ಮೋದಿ ಅವರಿಗೆ ಭವ್ಯ ಸ್ವಾಗತ ನೀಡಿದರು. ಭಾರತ ಮತ್ತು ಅಮೆರಿಕದ ಧ್ವಜಗಳನ್ನು ಹಿಡಿದು, ‘ಭಾರತ್‌ ಮಾತಾ ಕಿ ಜೈ’, ‘ವಂದೇ ಮಾತರಂ’ ಮತ್ತು ‘ಮೋದಿ ಮೋದಿ’ ಎಂದು ಘೋಷಣೆಗಳನ್ನು ಕೂಗಿದರು.

ಬಳಿಕ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಮೋದಿ ಅವರು, ‘ತೀವ್ರ ಚಳಿಯಲ್ಲೂ ಬೆಚ್ಚಗಿನ ಸ್ವಾಗತ ದೊರೆತಿದೆ. ಶೀತದ ನಡುವೆಯೂ ಭಾರತೀಯ ಸಮುದಾಯದವರು ವಾಷಿಂಗ್ಟನ್‌ನಲ್ಲಿ ನನ್ನನ್ನು ಅತ್ಯಂತ ವಿಶೇಷವಾಗಿ ಬರಮಾಡಿಕೊಂಡಿದ್ದಾರೆ. ಅವರಿಗೆ ಕೃತಜ್ಞತೆಗಳು’ ಎಂದು ಹೇಳಿದ್ದಾರೆ.

‘ಉಭಯ ದೇಶಗಳ ಜನರ ಉಜ್ವಲ ಭವಿಷ್ಯಕ್ಕೆ ಅನುಕೂಲ ಆಗುವಂತೆ ನಾವು ನಿಕಟವಾಗಿ ಕಾರ್ಯ ನಿರ್ವಹಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಟ್ರಂಪ್‌ ಅವರು ಕಳೆದ ತಿಂಗಳು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಮೆರಿಕಕ್ಕೆ ಭೇಟಿ ನೀಡಿದ ಜಾಗತಿಕ ನಾಯಕರ ಪೈಕಿ ನರೇಂದ್ರ ಮೋದಿ ನಾಲ್ಕನೆಯವರು. ಇದಕ್ಕೂ ಮುನ್ನ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಜಪಾನ್‌ ಪ್ರಧಾನಿ ಶಿಗೆರು ಇಶಿಬಾ ಮತ್ತು ಜೋರ್ಡನ್ ದೊರೆ ಎರಡನೇ ಅಬ್ದುಲ್ಲಾ ಅವರು ಭೇಟಿ ನೀಡಿದ್ದರು.

ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕರಾದ ತುಳಸಿ ಗಬ್ಬಾರ್ಡ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್‌ನಲ್ಲಿ ಮಾತುಕತೆ ನಡೆಸಿದರು 

ಗುಪ್ತಚರ ಮುಖ್ಯಸ್ಥೆ ತುಳಸಿ -ಮೋದಿ ಚರ್ಚೆ

ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕರಾದ ತುಳಸಿ ಗಬ್ಬಾರ್ಡ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಭಯೋತ್ಪಾದನೆ ನಿಗ್ರಹ ಮತ್ತು ಹೊಸ ಬಗೆಯ ಬೆದರಿಕೆಗಳ ವಿರುದ್ಧ ಉಭಯ ದೇಶಗಳ ನಡುವೆ ಗುಪ್ತಚರ ಸಹಕಾರ ವೃದ್ಧಿಸುವ ಕುರಿತು ಉಭಯ ನಾಯಕರು ಚರ್ಚಿಸಿದರು. ಹಿಂದೂ ಅಮೆರಿಕನ್‌ ಆಗಿರುವ ತುಳಸಿ ಅವರು ಅಮೆರಿಕದ ಗುಪ್ತಚರ ವಿಭಾಗದ ನಿರ್ದೇಶಕರಾಗಿ ಬುಧವಾರವಷ್ಟೇ ಅಧಿಕಾರ ಸ್ವೀಕರಿಸಿದ್ದರು. ಅತ್ಯುನ್ನತ ಹುದ್ದೆ ಅಲಂಕರಿಸಿದ ತುಳಸಿ ಅವರಿಗೆ ಮೋದಿ ಅವರು ಈ ವೇಳೆ ಅಭಿನಂದನೆ ಸಲ್ಲಿಸಿದರು. ‘ತುಳಸಿ ಗಬ್ಬಾರ್ಡ್‌ ಅವರು ಭಾರತ– ಅಮೆರಿಕ ಬಾಂಧವ್ಯದ ಪರ ಗಟ್ಟಿ ಧ್ವನಿಯಾಗಿದ್ದಾರೆ’ ಎಂದು ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಉಭಯ ನಾಯಕರು ಭಯೋತ್ಪಾದನೆ ನಿಗ್ರಹ ಸೈಬರ್‌ ಭದ್ರತೆ ಹೊಸ ಬಗೆಯ ಬೆದರಿಕೆಗಳ ಕುರಿತು ಚರ್ಚೆ ನಡೆಸಿದರು’ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.