ಕಠ್ಮಂಡು: ನೇಪಾಳದ ಬಾರಾ ಜಿಲ್ಲೆಯಲ್ಲಿರುವ ‘ಗಾಧಿಮಾಯಿ’ ದೇವಸ್ಥಾನದಲ್ಲಿ ಆರಂಭಗೊಂಡಿರುವ ‘ಗಾಧಿಮಾಯಿ ಮೇಳ’ದಲ್ಲಿ ಪ್ರಾಣಿವಧೆ ಮಾಡದಂತೆ ಭಾರತ ಮತ್ತು ನೇಪಾಳದ ಬಲಪಂಥೀಯ ಸಂಘಟನೆಗಳು ಒತ್ತಾಯಿಸಿವೆ.
ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ‘ಗಾಧಿಮಾಯಿ ಮೇಳ’ ಉತ್ಸವವು ಸೋಮವಾರ ಆರಂಭಗೊಂಡಿದ್ದು, ಉಪ ರಾಷ್ಟ್ರಪತಿ ರಾಮ್ ಸಹಾಯ ಯಾದವ್ ಅವರು ಉದ್ಘಾಟಿಸಿದರು. ಈ ಉತ್ಸವದ ಭಾಗವಾಗಿ ಡಿ.8 ಮತ್ತು 9ರಂದು ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ.
ಪ್ರಾಣಿಬಲಿಯು ಸೂಕ್ತವಲ್ಲ ಎಂದು 2019ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೂ ಪ್ರಾಣಿಬಲಿಗೆ ಸಿದ್ಧತೆ ನಡೆದಿದೆ.
ಭಾನುವಾರ ತಲಾ ಒಂದೊಂದು ಇಲಿ, ಕೋಣ, ಮೇಕೆ, ಬಾತುಕೋಳಿ ಮತ್ತು ಪಾರಿವಾಳಗಳನ್ನು ಬಲಿ ನೀಡುವ ಮೂಲಕ ‘ಪಂಚಬಲಿ’ (ಐದು ಪ್ರಾಣಿ –ಪಕ್ಷಿಗಳ ಬಲಿ) ಆಚರಿಸಿ ಔಪಚಾರಿಕವಾಗಿ ಪ್ರಾಣಿಬಲಿಯನ್ನು ಪ್ರಾರಂಭಿಸಲಾಗುತ್ತದೆ.
ಈ ಬಾರಿ ‘ರಕ್ತರಹಿತ ಗಾಧಿಮಾಯಿ’ ಆಚರಿಸಬೇಕೆಂದು ಭಾರತ ಮತ್ತು ನೇಪಾಳದ ಅನೇಕ ಸಂಘಟನೆಗಳು ಅಭಿಯಾನ ಆರಂಭಿಸಿವೆ. ಆದರೆ ಈಗಾಗಲೇ ಭಕ್ತರು ಪ್ರಾಣಿಬಲಿಗೆ ತಯಾರಿ ನಡೆಸಿದ್ದಾರೆ.
ನಿರ್ಬಂಧಗಳ ಹೊರತಾಗಿಯೂ ಭಾರತದ ವಿವಿಧ ರಾಜ್ಯಗಳಿಂದ ಈಗಾಗಲೇ 460 ಕೋಣಗಳನ್ನು ಅಕ್ರಮವಾಗಿ ನೇಪಾಳಕ್ಕೆ ಕರೆತರಲಾಗಿದೆ ಎಂದು ಪ್ರಾಣಿ ಕಲ್ಯಾಣ ಸಂಘಟನೆ ಹೇಳಿದೆ.
17ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಗಾಧಿಮಾಯಿ ದೇವಸ್ಥಾನದಲ್ಲಿ ಭಗವತಿ ಅಥವಾ ಕಾಳಿ ರೂಪದಲ್ಲಿ ದೇವರನ್ನು ಆರಾಧಿಸಲಾಗುತ್ತದೆ. ಇಲ್ಲಿಗೆ ಬರುವ ಭಕ್ತರು ತಮ್ಮ ಬೇಡಿಕೆಗಳು ಈಡೇರಿದ ಬಳಿಕ ಪ್ರಾಣಿ ಬಲಿ ನೀಡಬೇಕು ಎಂಬ ನಂಬಿಕೆ ಇದೆ. ಹೀಗಾಗಿ ಅನೇಕ ಭಕ್ತರು ಮೇಳದಲ್ಲಿ ವಿವಿಧ ಪ್ರಾಣಿಗಳನ್ನು ಬಲಿ ನೀಡುತ್ತಾರೆ.
2009ರಲ್ಲಿ ಈ ಮೇಳದಲ್ಲಿ 5 ಲಕ್ಷ ಪ್ರಾಣಿಗಳನ್ನು ಬಲಿ ನೀಡಲಾಗಿತ್ತು. ಕಾರ್ಯಕರ್ತರ ನಿರಂತರ ಹೋರಾಟದಿಂದಾಗಿ ಈ ಸಂಖ್ಯೆಯು 2014 ಮತ್ತು 2019ರಲ್ಲಿ 2.50ಲಕ್ಷಕ್ಕೆ ಇಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.