
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್
ಕೃಪೆ: ಪಿಟಿಐ
ಏರ್‌ಫೋರ್ಸ್ ಒನ್: ಅಪರೂಪದ ಖನಿಜಗಳ ರಫ್ತಿಗೆ ಚೀನಾ ಒಪ್ಪಿದರೆ ಮತ್ತು ಅಮೆರಿಕದಿಂದ ಸೋಯಾಬೀನ್ ಖರೀದಿ ಆರಂಭಿಸಿದರೆ, ಚೀನಾದ ಮೇಲೆ ಹೇರಿರುವ ಭಾರಿ ಪ್ರಮಾಣದ ಪ್ರತಿ ಸುಂಕವನ್ನು ಕಡಿತ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ದಕ್ಷಿಣ ಕೊರಿಯಾದಲ್ಲಿ ನಡೆದ ನೇರ ಮಾತುಕತೆ ವೇಳೆ ಟ್ರಂಪ್ ಸುಂಕ ಕಡಿತದ ಪ್ರಸ್ತಾವ ಇರಿಸಿದ್ದಾರೆ. ಆದರೆ, ಈ ಬಗ್ಗೆ ಚೀನಾ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಷಿ ಜಿನ್‌ಪಿಂಗ್ ಭೇಟಿಯ ಬೆನ್ನಲ್ಲೇ, ತಮ್ಮ ಸಾಮಾಜಿಕ ಜಾಲತಾಣ ‘ಟ್ರುಥ್ ಸೋಷಿಯಲ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ಮುಂದಿನ ಏಪ್ರಿಲ್‌ನಲ್ಲಿ ಚೀನಾಕ್ಕೆ ಭೇಟಿ ನೀಡುತ್ತೇನೆ. ಜಿನ್‌ಪಿಂಗ್ ನಮ್ಮಲ್ಲಿಗೂ ಬರುತ್ತಾರೆ. ವಿಶ್ವದ ಎರಡು ಪ್ರಮುಖ ಆರ್ಥಿಕ ಶಕ್ತಿಗಳ ನಡುವಿನ ಪಾಲುದಾರಿಕೆ ಹೆಚ್ಚಲಿದೆ. ನಮ್ಮ ನಡುವೆ ಈಗ ಯಾವುದೇ ಅಡೆತಡೆ ಇಲ್ಲ. ಅತಿ ಶೀಘ್ರದಲ್ಲೇ ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
ಅಪರೂಪದ ಖನಿಜಗಳ ರಫ್ತಿನ ಮೇಲೆ ಚೀನಾ ನಿರ್ಬಂಧ ಹೇರಿದ ಬೆನ್ನಲ್ಲೇ, ತಕ್ಷಣದಿಂದ ಜಾರಿಗೆ ಬರುವಂತೆ ಚೀನಾದ ಮೇಲೆ ಶೇ 100ರಷ್ಟು ಆಮದು ಸುಂಕ ವಿಧಿಸುವುದಾಗಿ ಟ್ರಂಪ್ ಅ.10ರಂದು ಹೇಳಿದ್ದರು. ಇದೀಗ ಈ ಸುಂಕವು ಮೊದಲಿನಂತೆ ಶೇ 47ರಷ್ಟೇ ಇರಲಿದೆ ಎಂದು ಟ್ರಂಪ್ ಹೇಳಿದ್ದಾರೆ.
‘ಚೀನಾಕ್ಕೆ ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಸುಧಾರಿತ ಕಂಪ್ಯೂಟರ್ ಚಿಪ್‌ಗಳನ್ನು ರಫ್ತು ಮಾಡುವ ಬಗ್ಗೆಯೂ ಮಾತುಕತೆ ನಡೆಸಿದ್ದೇನೆ. ಈ ಬಗ್ಗೆ ಅಮೆರಿಕದ ಎನ್‌ವಿಡಿಯಾ ಕಂಪನಿ, ಚೀನಾದ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಲಿದೆ’ ಎಂದು ಟ್ರಂಪ್ ಹೇಳಿದರು.
‘ಕೆಲವು ಭಿನ್ನಾಭಿಪ್ರಾಯಗಳು ಅನಿವಾರ್ಯವಾದರೂ ಯಾವಾಗಲೂ ಘರ್ಷಣೆಯಲ್ಲಿ ತೊಡಗಿರಲು ಸಾಧ್ಯವಿಲ್ಲ’ ಎಂದು ಜಿನ್‌ಪಿಂಗ್ ಹೇಳಿರುವುದಾಗಿ ಹಾಗೂ ಅಪರೂಪದ ಖನಿಜಗಳ ರಫ್ತಿನ ಮೇಲೆ ವಿಧಿಸಿರುವ ನಿರ್ಬಂಧ ಸಡಿಲಿಸುವ ಇಂಗಿತವನ್ನೂ ವ್ಯಕ್ತಪಡಿಸಿರುವುದಾಗಿ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
‘ಟಿಕ್‌ಟಾಕ್’ ನಿರ್ಬಂಧ ಸಡಿಲಿಕೆ?
ಬೂಸನ್: ‘ಟಿಕ್‌ಟಾಕ್’ ಮೇಲಿನ ನಿರ್ಬಂಧ ಸಡಿಲಗೊಳಿಸಲು ಅಮೆರಿಕದೊಂದಿಗೆ ಪ್ರಯತ್ನ ನಡೆದಿದೆ ಎಂದು ಚೀನಾದ ವಾಣಿಜ್ಯ ಸಚಿವಾಲಯ ಹೇಳಿದೆ. ಚೀನಾದ ‘ಬೈಟ್‌ಡ್ಯಾನ್ಸ್’ ಕಂಪನಿಗೆ ಸೇರಿದ ‘ಟಿಕ್‌ಟಾಕ್’ ಅನ್ನು ಜೋ ಬೈಡನ್ ನೇತೃತ್ವದ ಹಿಂದಿನ ಸರ್ಕಾರವು ನಿಷೇಧಿಸಿತ್ತು. ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ‘ಟಿಕ್‌ಟಾಕ್’ ಮೇಲಿನ ನಿರ್ಬಂಧವನ್ನು ವಿಸ್ತರಿಸುವುದಾಗಿ ಹೇಳಿದ್ದರು. ಇದೀಗ ಟ್ರಂಪ್ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವೆ ಮಾತುಕತೆ ನಡೆದಿರುವ ಬೆನ್ನಲ್ಲೇ ಟಿಕ್‌ಟಾಕ್ ಮೇಲಿನ ನಿರ್ಬಂಧ ತೆರವುಗೊಳ್ಳುವ ಆಶಾವಾದ ಮೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.