ADVERTISEMENT

ಚೀನಾದೊಂದಿಗೆ ಸಂಬಂಧ ತುಂಬಾ ಉತ್ತಮವಾಗಿದೆ: ಜಿನ್‌ಪಿಂಗ್ ಜೊತೆ ಟ್ರಂಪ್ ಮಾತುಕತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2026, 5:44 IST
Last Updated 5 ಫೆಬ್ರುವರಿ 2026, 5:44 IST
<div class="paragraphs"><p>ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಚೀನಾದ ಅಧ್ಯಕ್ಷ&nbsp; ಷಿ&nbsp;ಜಿನ್‌ಪಿಂಗ್</p></div>

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಚೀನಾದ ಅಧ್ಯಕ್ಷ  ಷಿ ಜಿನ್‌ಪಿಂಗ್

   

ವಾಷಿಂಗ್ಟನ್‌: ‘ಚೀನಾದೊಂದಿಗೆ ನಮ್ಮ ಸಂಬಂಧ ತುಂಬಾ ಉತ್ತಮವಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಬೆನ್ನಲ್ಲೇ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ ಏಪ್ರಿಲ್‌ನಲ್ಲಿ ಚೀನಾಕ್ಕೆ ಭೇಟಿ ನೀಡುವುದಾಗಿಯೂ ತಿಳಿಸಿದ್ದಾರೆ.

ADVERTISEMENT

‘ಚೀನಾ ಅಧ್ಯಕ್ಷ ಷಿ ಅವರೊಂದಿಗೆ ದೂರವಾಣಿ ಮೂಲಕ ದೀರ್ಘ ಸಂಭಾಷಣೆ ನಡೆಸಿದ್ದು, ವ್ಯಾಪಾರ, ಮಿಲಿಟರಿ, ಏಪ್ರಿಲ್‌ ಪ್ರವಾಸ, ತೈವಾನ್‌, ರಷ್ಯಾ–ಉಕ್ರೇನ್‌ ಯುದ್ಧ, ಇರಾನ್‌ ಪರಿಸ್ಥಿತಿ, ಅಮೆರಿಕದಿಂದ ತೈಲ, ಅನಿಲ ಮತ್ತು ಕೃಷಿ ಉತ್ಪನ್ನಗಳ ಖರೀದಿ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು. ಎಲ್ಲವೂ ಸಕರಾತ್ಮಕವಾಗಿತ್ತು’ ಎಂದು ಟ್ರಂಪ್‌ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

‘ಚೀನಾದೊಂದಿಗಿನ ಅಮೆರಿಕದ ಸಂಬಂಧ ಮತ್ತು ಅಧ್ಯಕ್ಷ ಷಿ ಅವರೊಂದಿಗಿನ ನನ್ನ ವೈಯಕ್ತಿಕ ಸಂಬಂಧವು ತುಂಬಾ ಉತ್ತಮವಾಗಿದೆ. ಅದನ್ನು ಹಾಗೆಯೇ ಉಳಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ನಾವಿಬ್ಬರೂ ಅರಿತುಕೊಂಡಿದ್ದೇವೆ. ನನ್ನ ಅಧ್ಯಕ್ಷತೆಯ ಮುಂದಿನ ಮೂರು ವರ್ಷಗಳಲ್ಲಿ ಚೀನಾದೊಂದಿಗೆ ಅನೇಕ ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸಲಾಗುವುದು’ ಎಂದು ಹೇಳಿದ್ದಾರೆ.

ಟ್ರಂಪ್‌ ಅವರೊಂದಿಗಿನ ಸಂಭಾಷಣೆ ವೇಳೆ ಚೀನಾ ಅಧ್ಯಕ್ಷ ಷಿ, ತೈವಾನ್‌ ವಿಷಯ ಪ್ರಸ್ತಾ‍ಪಿಸಿದ್ದಾರೆ ಎಂದು ‘ಚೀನಾ ಡೈಲಿ’ ವರದಿ ಮಾಡಿದೆ.

‘ಅಮೆರಿಕ ಮತ್ತು ಚೀನಾ ಸಂಬಂಧದಲ್ಲಿ ತೈವಾನ್ ಪ್ರಮುಖ ವಿಷಯವಾಗಿದ್ದು, ತೈವಾನ್ ಅನ್ನು ಚೀನಾದಿಂದ ಬೇರ್ಪಡಿಸಲು ಎಂದಿಗೂ ಬಿಡುವುದಿಲ್ಲ ಎಂದು ಷಿ, ಟ್ರಂಪ್‌ಗೆ ತಿಳಿಸಿದ್ದಾರೆ. ತೈವಾನ್‌ಗೆ ಶಸ್ತ್ರಾಸ್ತ್ರ ಮಾರಾಟ ಮಾಡುವುದನ್ನು ಅಮೆರಿಕ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದೂ ಹೇಳಿದ್ದಾರೆ’ ಎಂದು ವರದಿ ತಿಳಿಸಿದೆ.

ಇದಕ್ಕೂ ಮುನ್ನ, ಷಿ ಜಿನ್‌ಪಿಂಗ್‌ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ವರ್ಚುವಲ್ ಸಭೆ ನಡೆಸಿದ್ದರು. ಉಭಯ ದೇಶಗಳ ನಡುವೆ ಸಹಕಾರ ಬಲಪಡಿಸುವ ಬಗ್ಗೆ ಚರ್ಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.