ADVERTISEMENT

ತಾಲಿಬಾನ್‌ಗಳಿಂದ 13 ಮಂದಿ ಹಜಾರಸ್‌ಗಳ ಹತ್ಯೆ: ಆಮ್ನೆಸ್ಟಿ

ಏಜೆನ್ಸೀಸ್
Published 5 ಅಕ್ಟೋಬರ್ 2021, 8:40 IST
Last Updated 5 ಅಕ್ಟೋಬರ್ 2021, 8:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೈರೊ: ತಾಲಿಬಾನ್ ಪಡೆಗಳು ಕಾನೂನು ಬಾಹಿರವಾಗಿ 13 ಮಂದಿ ಹಜಾರಸ್‌ ಜನಾಂಗದವರನ್ನು ಕೊಂದಿದ್ದು, ಅದರಲ್ಲಿ ಹೆಚ್ಚಿನವರು ತಾಲಿಬಾನ್ ಬಂಡುಕೋರರಿಗೆ ಶರಣಾಗಿದ್ದ ಅಫ್ಗನ್‌ ಸೈನಿಕರಾಗಿದ್ದಾರೆ ಎಂದುಜಾಗತಿಕ ಮಾನವ ಹಕ್ಕುಗಳ ಸಂಘಟನೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ತಿಳಿಸಿದೆ.

ಆಗಸ್ಟ್ 30ರಂದು ಮಧ್ಯ ಅಫ್ಗಾನಿಸ್ತಾನದ ಡೇಕುಂಡಿ ಪ್ರಾಂತ್ಯದ ಕಹೋರ್ ಗ್ರಾಮದಲ್ಲಿ ಈ ಹತ್ಯೆಗಳು ನಡೆದಿವೆ. ಕೊಲೆಯಾದವರಲ್ಲಿ 11 ಮಂದಿ ಅಫ್ಗನ್ ರಾಷ್ಟ್ರೀಯ ಭದ್ರತಾ ಪಡೆಗಳ ಸದಸ್ಯರು ಮತ್ತು ಇಬ್ಬರು ನಾಗರಿಕರು. ಇವರಲ್ಲಿ 17 ವರ್ಷದ ಯುವತಿಯೂ ಸೇರಿದ್ದಾಳೆ ಎಂದು ಸಂಘಟನೆ ನಡೆಸಿದ ತನಿಖೆಯಿಂದ ಬಹಿರಂಗವಾಗಿದೆ.

ತಾಲಿಬಾನಿಗಳು, ಅಫ್ಗಾನಿಸ್ತಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಎರಡು ವಾರಗಳ ನಂತರ ಈ ಹತ್ಯೆಗಳು ನಡೆದಿರುವುದಾಗಿ ವರದಿಯಾಗಿವೆ. ತಾಲಿಬಾನ್ ನಾಯಕರು, ‘1990ರಲ್ಲಿ ಕಠಿಣ ಆಡಳಿತ ನಡೆಸಿದಂತೆ ಈ ಬಾರಿ ನಡೆಸುವುದಿಲ್ಲ. ನಾವು ಬದಲಾಗಿದ್ದೇವೆ‘ ಎಂದು ಅಫ್ಗನ್‌ ಜನರಿಗೆ ಭರವಸೆ ನೀಡುತ್ತಿದ್ದ ವೇಳೆಯಲ್ಲಿ ಇಂಥ ಕ್ರೂರ ಘಟನೆ ನಡೆದಿದೆ.

ADVERTISEMENT

ಅಫ್ಗಾನಿಸ್ತಾನದಲ್ಲಿರುವ 3.5 ಕೋಟಿ ಜನಸಂಖ್ಯೆಯಲ್ಲಿ ಹಜಾರಸ್‌ ಜನಾಂಗದವರು ಶೇ 9 ರಷ್ಟಿದ್ದಾರೆ. ಬಹುಸಂಖ್ಯಾತ ಸುನ್ನಿ ಜನಾಂಗದವರಿರುವ ಅಫ್ಗನ್‌ನಲ್ಲಿ ಹಜಾರಸ್‌ನವರು ಅಲ್ಪಸಂಖ್ಯಾತ ಶಿಯಾ ಸಮುದಾಯಕ್ಕೆ ಸೇರಿದವರು. ಇದೇಕ ಕಾರಣಕ್ಕೆ ಈ ಸಮುದಾಯದವರು ಪದೇ ಪದೇ ಇಂಥ ದುಷ್ಕೃತ್ಯಗಳಿಗೆ ಗುರಿಯಾಗುತ್ತಿದ್ದಾರೆ.

‘ಹಜಾರಸ್‌ಗಳ ಮೇಲೆ ನಡೆದಿರುವ ಇಂಥ ಕ್ರೌರ್ಯಗಳು, ಹಿಂದೆ ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ಗಳು ಇದೇ ಜನಾಂಗದ ಮೇಲೆ ಯಾವ ರೀತಿ ದೌರ್ಜನ್ಯ ನಡೆಸುತ್ತಿದ್ದರು ಎಂಬುದಕ್ಕೆ ಸಾಕ್ಷ್ಯಗಳನ್ನು ನೀಡುತ್ತವೆ‘ ಎಂದು ಆಮ್ನೆಸ್ಟಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಆಗ್ನೆಸ್ ಕ್ಯಾಲಮಾರ್ಡ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.