ADVERTISEMENT

ಮಿಲಿಟರಿ ತಾಲೀಮು ಅಂತ್ಯ, ಶಾಶ್ವತ ನೆಲೆಗಳಿಗೆ ಸೇನೆ ವಾಪಸ್: ರಷ್ಯಾ

ಏಜೆನ್ಸೀಸ್
Published 16 ಫೆಬ್ರುವರಿ 2022, 10:17 IST
Last Updated 16 ಫೆಬ್ರುವರಿ 2022, 10:17 IST
ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ   

ಮಾಸ್ಕೊ: ಉಕ್ರೇನ್‌ನ ಸ್ವಾಯತ್ತ ಪ್ರದೇಶ ಕ್ರೈಮಿಯಾದ ಸಮೀಪ ನಡೆಸುತ್ತಿದ್ದ ಯುದ್ಧ ತಾಲೀಮನ್ನು ಕೊನೆಗೊಳಿಸಿರುವುದಾಗಿ ರಷ್ಯಾ ಹೇಳಿದೆ. ಸೈನಿಕರು ತಮ್ಮ ನೆಲೆಗಳಿಗೆ ವಾಪಸ್ ಆಗುತ್ತಿದ್ದಾರೆ ಎಂದು ಅದು ತಿಳಿಸಿದೆ. ಉಕ್ರೇನ್ ಸಮೀಪದಲ್ಲಿ ತಾಲೀಮಿನಲ್ಲಿ ತೊಡಗಿದ್ದ ಸೇನೆಯ ಒಂದು ತಂಡವನ್ನು ನಿನ್ನೆ ಹಿಂಪಡೆದಿದ್ದ ರಷ್ಯಾ ಉದ್ವಿಗ್ನತೆಯನ್ನು ಅಂತ್ಯಗೊಳಿಸುವ ಸೂಚನೆ ನೀಡಿತ್ತು.

‘ದಕ್ಷಿಣ ಮಿಲಿಟರಿ ಜಿಲ್ಲೆಯ ಸೇನಾ ಘಟಕವು ತನ್ನ ಯುದ್ಧತಂತ್ರದ ತಾಲೀಮನ್ನು ಪೂರ್ಣಗೊಳಿಸಿದ್ದು, ಸೈನಿಕರು ತಮ್ಮ ಶಾಶ್ವತ ನೆಲೆಗಳಿಗೆ ಮರಳುತ್ತಿದ್ದಾರೆ’ಎಂದು ರಷ್ಯಾ ರಕ್ಷಣಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಮೇನ್‌ಲ್ಯಾಂಡ್‌ನ ರಷ್ಯಾದ ವಶದಲ್ಲಿರುವ ಪೆನಿನ್‌ಸುಲಾದಿಂದ ಸೇನೆ ತೆರಳುತ್ತಿರುವ ದೃಶ್ಯಗಳನ್ನು ಸರ್ಕಾರಿ ಸ್ವಾಮ್ಯದ ದೂರದರ್ಶ‌ನದಲ್ಲಿ ಪ್ರದರ್ಶಿಸಲಾಗಿದೆ.

ADVERTISEMENT

ಟ್ಯಾಂಕ್‌ಗಳು, ಪದಾತಿ ದಳದ ವಾಹನಗಳು ಮತ್ತು ಫಿರಂಗಿಗಳು ಕ್ರೈಮಿಯಾದಿಂದ ರೈಲಿನ ಮೂಲಕ ಹೊರಡುತ್ತಿವೆ ಎಂದು ಹೇಳಿಕೆ ತಿಳಿಸಿದೆ.

ಆದರೆ, ಪಾಶ್ಚಿಮಾತ್ಯ ದೇಶಗಳು ಮಾತ್ರ ರಷ್ಯಾ ಈಗಲೂ ಉಕ್ರೇನ್ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸುತ್ತಿವೆ. ರಷ್ಯಾದಿಂದ ಈಗಲೂ ದಾಳಿಯ ಸಾಧ್ಯತೆ ಹೆಚ್ಚಿದೆ ಎಂದು ಮಂಗಳವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದರು.

ಸೇನೆಯನ್ನು ಹಿಂಪಡೆದಿರುವುದಾಗಿ ರಷ್ಯಾ ಹೇಳುತ್ತಿದ್ದರೂ ಸಹ ಸೂಕ್ತ ಪರಿಶೀಲನೆ ಮೂಲಕ 1 ಲಕ್ಷ ಸೈನಿಕರೂ ವಾಪಸ್ ಆಗಿದ್ದಾರೆಯೇ ಎಂಬುದನ್ನು ದೃಢಪಡಿಸಿಕೊಳ್ಳುವ ಅಗತ್ಯವಿದೆ ಎಂದು ಬೈಡನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.