ADVERTISEMENT

ಆಗಸ್ಟ್‌ 12ಕ್ಕೆ ಜಗತ್ತಿನ ಮೊದಲ ಕೋವಿಡ್‌ ಲಸಿಕೆ ಬಿಡುಗಡೆ ಮಾಡಲಿದೆಯೇ ರಷ್ಯಾ?

ಏಜೆನ್ಸೀಸ್
Published 10 ಆಗಸ್ಟ್ 2020, 15:01 IST
Last Updated 10 ಆಗಸ್ಟ್ 2020, 15:01 IST
ಕೋವಿಡ್‌ ಲಸಿಕೆ–ಪ್ರಾತಿನಿಧಿಕ ಚಿತ್ರ
ಕೋವಿಡ್‌ ಲಸಿಕೆ–ಪ್ರಾತಿನಿಧಿಕ ಚಿತ್ರ   

ಮಾಸ್ಕೊ: ಜಾಗತಿಕವಾಗಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ, ಈ ನಡುವೆ ರಷ್ಯಾ ಕೋವಿಡ್‌ಗೆ ಜಗತ್ತಿನ ಮೊದಲ ಲಸಿಕೆ ದಾಖಲಿಸಲು ಸಜ್ಜಾಗಿದೆ.

ಆಗಸ್ಟ್ 12ರಂದು ಕೋವಿಡ್ ಲಸಿಕೆ ಬಿಡುಗಡೆಗಾಗಿ ಅಂತಿಮ ಹಂತದ ಅನುಮೋದನೆಗೆ ಮುಂದಾಗಲಿದೆ. ಗಮೆಲಿಯಾ ಸಂಶೋಧನಾ ಸಂಸ್ಥೆ ಮತ್ತು ರಷ್ಯಾ ರಕ್ಷಣಾ ಸಚಿವಾಲಯದ ಸಂಶೋಧಕರು ಜೊತೆಯಾಗಿ ಲಸಿಕೆ ಅಭಿವೃದ್ಧಿ ಪಡಿಸಿದ್ದಾರೆ.

ಮನುಷ್ಯರ ಮೇಲೆ ಕೋವಿಡ್‌ ಲಸಿಕೆಯ ಮೂರನೇ ಹಂತದ ಪ್ರಯೋಗದಲ್ಲಿ ಭಾಗಿಯಾದವರಿಗೆ ಅಂತಿಮ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರಯೋಗಗಳಲ್ಲಿ ಭಾಗಿಯಾದ ಎಲ್ಲ 38 ಜನರಲ್ಲಿಯೂ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದನ್ನು ಗಮನಿಸಿರುವುದಾಗಿ ರಷ್ಯಾ ರಕ್ಷಣಾ ಸಚಿವಲಯ ಹೇಳಿರುವುದಾಗಿ ವರದಿಯಾಗಿದೆ.

ADVERTISEMENT

ಜೂನ್‌ 18ರಿಂದ ಕ್ಲಿನಿಕಲ್‌ ಟ್ರಯಲ್‌ಗಳನ್ನು (ಮನುಷ್ಯರ ಮೇಲೆ) ಆರಂಭಿಸಲಾಗಿತ್ತು. ಪ್ರಯೋಗಕ್ಕೆ ಒಳಗಾದವರ ಪೈಕಿ ಮೊದಲ ಗುಂಪು ಜುಲೈ 15ರಂದು ಸಂಶೋಧನಾ ಕೇಂದ್ರಗಳಿಂದ ಬಿಡುಗಡೆಯಾಗಿದೆ ಹಾಗೂ ಎರಡನೇ ಗುಂಪು ಜುಲೈ 20ರಂದು ಮನೆಗೆ ಮರಳಿದೆ.

ಅಭಿವೃದ್ಧಿ ಪಡಿಸಲಾಗಿರುವ ಲಸಿಕೆಯು ವ್ಯಕ್ತಿಯ ಆರೋಗ್ಯದ ಮೇಲೆ ಯಾವುದೇ ಹಾನಿ ಉಂಟು ಮಾಡುವ ಅಪಾಯಗಳಿಲ್ಲ ಎಂದು ಗಮೆಲಿಯಾ ನ್ಯಾಷನಲ್‌ ರಿಸರ್ಚ್‌ ಸೆಂಟರ್‌ನ ನಿರ್ದೇಶಕ ಅಲೆಗ್ಸಾಂಡರ್‌ ಗಿಂಟ್ಸ್‌ಬರ್ಗ್‌ ಹೇಳಿದ್ದಾರೆ. ಶೀಘ್ರದಲ್ಲಿಯೇ ಲಸಿಕೆ ತಯಾರಿಕೆ ಆರಂಭಿಸುವುದಾಗಿ ರಷ್ಯಾ ಘೋಷಣೆಯ ಬೆನ್ನಲ್ಲೇ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಉತ್ಪಾದನೆಗೆ ನಿಗದಿಯಾಗಿರುವ ಮಾರ್ಗಸೂಚಿ ಅನುಸರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಆಗ್ರಹಿಸಿದೆ.

ಎಲ್ಲ ಹಂತಗಳ ಪರೀಕ್ಷೆ ಪೂರ್ಣಗೊಳಿಸುವಂತೆಯೂ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಕೊರೊನಾ ಸೋಂಕು ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಿರುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳು, ಶಿಕ್ಷಕರಿಗೆ ಚಿಕಿತ್ಸೆ ನೀಡಲು ಮೊದಲಿಗೆ ಲಸಿಕೆ ಬಳಕೆಯಾಗಲಿದೆ ಎಂದು ರಷ್ಯಾ ಆರೋಗ್ಯ ಸಚಿವ ಮಿಖೈಲ್‌ ಮುರಷ್ಕೊ ಹೇಳಿದ್ದಾರೆ.

ಸೆಪ್ಟೆಂಬರ್‌ನಿಂದ ಸ್ಥಳೀಯವಾಗಿ ಕೊರೊನಾ ವೈರಸ್‌ ಲಸಿಕೆ ತಯಾರಿಕೆ ನಡೆಯಲಿದೆ ಎಂದು ರಷ್ಯಾದ ಸುದ್ದಿ ಮಾಧ್ಯಮ ಟಿಎಎಸ್‌ಎಸ್‌ ಇತ್ತೀಚೆಗಷ್ಟೇ ವರದಿ ಮಾಡಿದೆ. ಆದರೆ, ತರಾತುರಿಯಲ್ಲಿ ಲಸಿಕೆ ತಯಾರಿಕೆಗೆ ಮುಂದಾಗುತ್ತಿರುವ ಬಗ್ಗೆ ಅಮೆರಿಕ ತಕರಾರು ಎತ್ತಿದ್ದು, ಎಲ್ಲ ಪರೀಕ್ಷೆಗಳಿಗೂ ಮುನ್ನವೇ ಅಂತಹ ಲಸಿಕೆಗಳನ್ನು ಬಳಕೆಗೆ ಬಿಡುಗಡೆ ಮಾಡುವುದರಿಂದ ಸಮಸ್ಯೆ ಸೃಷ್ಟಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

ಎಬೊಲಾ ವೈರಸ್‌ ಚಿಕಿತ್ಸೆಗೆ ರಷ್ಯಾ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ಲಸಿಕೆಯೂ ವಿವಾದಗಳಿಂದ ಹೊರತಾಗಿಲ್ಲ.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.