
ಕೀವ್: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ 100ಕ್ಕೂ ಅಧಿಕ ಡ್ರೋನ್ ಬಳಸಿ ದಾಳಿ ನಡೆಸಿದೆ. ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 29 ಮಂದಿ ಗಾಯಗೊಂಡಿದ್ದಾರೆ.
ಸತತ ಎರಡನೇ ಬಾರಿಗೆ ರಷ್ಯಾ ರಾತ್ರಿ ವೇಳೆ ದಾಳಿ ಮಾಡಿ ನಮ್ಮ ನಾಗರಿಕರನ್ನು ಕೊಂದಿದೆ ಎಂದು ಉಕ್ರೇನ್ ಆಂತರಿಕ ಸಚಿವ ಥೋರ್ ಕ್ಲೈಮೆಂಕೊ ಹೇಳಿದ್ದಾರೆ.
ರಷ್ಯಾ ದಾಳಿಯಿಂದ ಎರಡು ವಸತಿ ಕಟ್ಟಡಗಳಿಗೆ ಬೆಂಕಿ ಬಿದ್ದಿದೆ. ತುರ್ತು ಕಾರ್ಯಾಚರಣಾ ತಂಡಗಳು ದಾಳಿ ನಡೆದ 9 ಮಹಡಿಯ ಮತ್ತು 16 ಮಹಡಿಯ ಕಟ್ಟಡಗಳಿಂದ ಜನರನ್ನು ಹೊರಗೆ ಕರೆ ತಂದಿದ್ದಾರೆ.
ಡ್ರೋನ್ ದಾಳಿಯಿಂದ ದಟ್ಟ ಹೊಗೆ ಆವರಿಸಿತ್ತು. ಹೊರಬರಲು ಸಾಧ್ಯವಾಗಲಿಲ್ಲ ಎಂದು 74 ವರ್ಷದ ಮಹಿಳೆ ಒಲ್ಹಾ ಹೇಳಿದ್ದಾರೆ.
‘ನಮ್ಮ ಮನೆಯ ಕಿಟಕಿಗಳು ದಟ್ಟ ಹೊಗೆಯಿಂದ ಕಪ್ಪಗಾಗಿದ್ದವು. ಕೆಳಗೆ ಹೋಗಲು ಸಾಧ್ಯವಾಗಲಿಲ್ಲ. ಬೆಡ್‌ಶೀಟ್‌ಗಳನ್ನು ಒದ್ದೆ ಮಾಡಿ ಬಾಗಿಲು ಮತ್ತು ಕಿಟಕಿಗೆ ಹಾಕಿ ಇಲ್ಲೇ ಉಳಿದೆವು’ ಎಂದಿದ್ದಾರೆ.
ಭಾನುವಾರ ರಾತ್ರಿ ರಷ್ಯಾ 101 ಡ್ರೋನ್‌ಗಳಿಂದ ದಾಳಿ ನಡೆಸಿದೆ. ಅದರಲ್ಲಿ 90 ಅನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ವಾಯುಪಡೆ ತಿಳಿಸಿದೆ. ಶನಿವಾರವೂ ದಾಳಿ ನಡೆಸಿದ್ದ ರಷ್ಯಾ 4 ಜನರನ್ನು ಕೊಂದಿತ್ತು.
ಉಕ್ರೇನ್‌ನ ಯುದ್ಧಕ್ಕೆ ನೆರವಾಗುವ ಇಂಧನ ಸೌಲಭ್ಯಗಳು, ರೈಲು ಮೂಲಸೌಕರ್ಯಗಳು, ಸೈನ್ಯ ನಿಯೋಜನೆ ಕೇಂದ್ರಗಳು, ಡ್ರೋನ್ ಕಾರ್ಖಾನೆಯಂತಹ ಇತರ ಮಿಲಿಟರಿ ಗುರಿಗಳನ್ನು ತಮ್ಮ ಪಡೆಗಳು ಹೊಡೆದುರುಳಿಸಿದವು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಭಾನುವಾರ ಹೇಳಿದೆ.
ಕೀವ್ ಮೇಲಿನ ದಾಳಿಗಳ ಬಗ್ಗೆ ಅಥವಾ ಉಕ್ರೇನ್ ನಾಗರಿಕರ ಸಾವುನೋವುಗಳ ಬಗ್ಗೆ ಅದು ನಿರ್ದಿಷ್ಟವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.