ADVERTISEMENT

Russia Ukraine War | ಉಕ್ರೇನ್‌ ಪ್ರತಿದಾಳಿ: 32 ಡ್ರೋನ್‌ ಹೊಡೆದು ಹಾಕಿದ ರಷ್ಯಾ

ಏಜೆನ್ಸೀಸ್
Published 30 ಡಿಸೆಂಬರ್ 2023, 13:07 IST
Last Updated 30 ಡಿಸೆಂಬರ್ 2023, 13:07 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಾಸ್ಕೊ: ವರ್ಷಾಂತ್ಯದಲ್ಲಿ ರಷ್ಯಾ 18 ತಾಸು ನಿರಂತರ ನಡೆಸಿದ ಭಾರಿ ಕ್ಷಿಪಣಿ ಮತ್ತು ಡ್ರೋನ್‌ ದಾಳಿಗೆ ಪ್ರತೀಕಾರವಾಗಿ ಉಕ್ರೇನ್‌ ಕೂಡ ಮರು ದಿನವೇ ರಷ್ಯಾದ ಪ್ರಮುಖ ನಗರಗಳ ಮೇಲೆ 32 ಡ್ರೋನ್‌ಗಳನ್ನು ಉಡಾಯಿಸಿದೆ. ಆದರೆ, ಈ ಎಲ್ಲ ಡ್ರೋನ್‌ಗಳನ್ನು ಪತ್ತೆ ಹಚ್ಚಿ ಅವು ಗುರಿ ಭೇದಿಸದಂತೆ ಆಕಾಶದಲ್ಲೇ ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಇದೇ ವರ್ಷದ ಮೇ ತಿಂಗಳಿಂದ ಉಕ್ರೇನ್‌ ಸೇನೆ ರಷ್ಯಾದ ಪಶ್ಚಿಮ ಭಾಗದ ನಗರಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ದಾಳಿ ತೀವ್ರಗೊಳಿಸಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ADVERTISEMENT

ಮಾಸ್ಕೊ, ಬ್ರಿಯಾನ್‌ಸ್ಕ್‌, ಓರಿಯೊಲ್‌, ಕರ್ಸ್ಕ್‌ ಪ್ರದೇಶಗಳ ವಾಯು ಪ್ರದೇಶಗಳಲ್ಲಿ ಉಕ್ರೇನ್‌ ಡ್ರೋನ್‌ಗಳು ಕಂಡುಬಂದವು. ಅವುಗಳನ್ನು ವಾಯು ರಕ್ಷಣಾ ವ್ಯವಸ್ಥೆಯಿಂದ ಹೊಡೆದುರುಳಿಸಲಾಯಿತು. ಯಾವುದೇ ಸಾವು– ನೋವಿನ ಬಗ್ಗೆ ವರದಿಯಾಗಿಲ್ಲ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಉಕ್ರೇನ್‌ನ ಪೂರ್ವ ಮತ್ತು ದಕ್ಷಿಣ ಹಾಗೂ ರಷ್ಯಾದ ಗಡಿ ಪ್ರದೇಶಗಳಲ್ಲಿ ಶೆಲ್ ದಾಳಿ ಮುಂದುವರಿದಿದೆ. ಶುಕ್ರವಾರ ಸಂಜೆ ರಷ್ಯಾದ ಬೆಲ್ಗೊರೊಡ್ ಪ್ರದೇಶದ ಮನೆಯೊಂದಕ್ಕೆ ಕ್ಷಿಪಣಿ ಅಪ್ಪಳಿಸಿ, ಒಬ್ಬ ವ್ಯಕ್ತಿ ಸತ್ತಿದ್ದಾರೆ. 10 ವರ್ಷ ಮಗು ಸೇರಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಮುಖ್ಯಸ್ಥ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಉಕ್ರೇನ್‌ ರಾಜಧಾನಿ ಕೀವ್‌ ಸೇರಿದಂತೆ ದೇಶದಾದ್ಯಂತ ಆರು ಪ್ರಮುಖ ನಗರಗಳ ಮೇಲೆ 122 ಕ್ಷಿಪಣಿಗಳು ಮತ್ತು 36 ಶಾಹಿದ್‌ ಡ್ರೋನ್‌ಗಳನ್ನು ರಷ್ಯಾ ಸೇನೆ ಗುರುವಾರ ರಾತ್ರಿಯಿಂದ ಶುಕ್ರವಾರದವರೆಗೂ ಉಡಾಯಿಸಿತ್ತು. ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 30ಕ್ಕೆ ತಲುಪಿದೆ. 144 ಜನರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.