ADVERTISEMENT

ಉಕ್ರೇನ್ ವಿಚಾರದಲ್ಲಿ ಪಾಶ್ಚಿಮಾತ್ಯ ನಿರ್ಬಂಧಗಳ ಒತ್ತಡಕ್ಕೆ ಮಣಿಯುವುದಿಲ್ಲ: ರಷ್ಯಾ

ರಾಯಿಟರ್ಸ್
Published 1 ಮಾರ್ಚ್ 2022, 12:39 IST
Last Updated 1 ಮಾರ್ಚ್ 2022, 12:39 IST
ವ್ಲಾಡಿಮಿರ್ ಪುಟಿನ್
ವ್ಲಾಡಿಮಿರ್ ಪುಟಿನ್   

ಮಾಸ್ಕೊ: ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳು ಉಕ್ರೇನ್ ಮೇಲಿನ ತನ್ನ ನಿರ್ಧಾರವನ್ನು ಬದಲಾಯಿಸುವುದಿಲ್ಲ ಎಂದು ರಷ್ಯಾ ಮಂಗಳವಾರ ಹೇಳಿದೆ.

ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳು ಹೆಚ್ಚಾಗುತ್ತಿರುವ ಬಗ್ಗೆ ಉತ್ತರಿಸಿದ ವಕ್ತಾರ ಮಿತ್ರಿ ಪೆಸ್ಕೊವ್, ಈ ಮೂಲಕ ಅವರು ತನ್ನ ನಿರ್ಧಾರವನ್ನು ಬದಲಿಸಲು ಒತ್ತಡ ಹೇರುತ್ತಿದ್ದಾರೆ. ಇದು ಎಂದಿಗೂ ಸಾಧ್ಯವಿಲ್ಲದ ಪ್ರಶ್ನೆ' ಎಂದು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪೆಸ್ಕೊವ್, ಸೋಮವಾರ ನಡೆದ ರಷ್ಯಾ ಮತ್ತು ಉಕ್ರೇನ್ ಅಧಿಕಾರಿಗಳ ನಡುವಿನ ಮೊದಲ ಸುತ್ತಿನ ಮಾತುಕತೆ ಬಗ್ಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಿಳಿಸಲಾಗಿದೆ. ಆದರೆ, ಇದರ ಫಲಿತಾಂಶವನ್ನು ನಿರ್ಣಯಿಸಲು ಇದು ಸಮಯವಲ್ಲ' ಎಂದರು.

ADVERTISEMENT

'ಪುಟಿನ್ ಮತ್ತು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ನಡುವಿನ ಮಾತುಕತೆ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಝೆಲೆನ್‌ಸ್ಕಿ ಅವರೇ ಉಕ್ರೇನ್ ಅಧ್ಯಕ್ಷ ಎಂದೇ ರಷ್ಯಾ ಈಗಲೂ ಗುರುತಿಸುತ್ತಿದೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಉಕ್ರೇನ್ ಸೈನಿಕರಿಗೆ ಝೆಲೆನ್‌ಸ್ಕಿ ಆದೇಶ ನೀಡಿದರೆ ಹೆಚ್ಚಿನ ಸಾವು-ನೋವುಗಳನ್ನು ತಡೆಯಬಹುದು' ಎಂದು ತಿಳಿಸಿದರು.

ರಷ್ಯಾಗೆ ಶರಣಾಗಲು ಉಕ್ರೇನ್ ನಿರಾಕರಿಸುತ್ತಿದೆ ಮತ್ತು ಅದರ ಪಡೆಗಳು ಉತ್ತರ, ಪೂರ್ವ ಮತ್ತು ದಕ್ಷಿಣದಿಂದ ರಷ್ಯಾದ ಆಕ್ರಮಣಕ್ಕೆ ಬಲವಾದ ಪ್ರತಿರೋಧವನ್ನು ಒಡ್ಡುತ್ತಿವೆ.

ರಷ್ಯಾದ ದಾಳಿಯು ನಾಗರಿಕರನ್ನು ಗುರಿಯಾಗಿಸಿದೆ ಮತ್ತು ಕ್ಲಸ್ಟರ್ ಬಾಂಬ್ ಹಾಗೂ ವ್ಯಾಕ್ಯೂಮ್ ಬಾಂಬ್‌ಗಳನ್ನು ಬಳಸುತ್ತಿದೆ ಎನ್ನುವ ಆರೋಪವನ್ನು ಅಲ್ಲಗಳೆದ ಪೆಸ್ಕೊವ್, ರಷ್ಯಾ ಯುದ್ಧ ಅಪರಾಧಗಳನ್ನು ಮಾಡಿದೆ ಎಂಬುದನ್ನು ಸ್ಪಷ್ಟವಾಗಿ ತಳ್ಳಿಹಾಕಿದರು.

ಹೆಚ್ಚಿನ ಸಂಖ್ಯೆಯ ನಾಗರಿಕರು ಹತ್ಯೆಯಾಗಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಪೆಸ್ಕೊವ್, ಸಾಕ್ಷಿಯನ್ನು ಒದಗಿಸದೆ, ಉಕ್ರೇನ್ ರಾಷ್ಟ್ರೀಯವಾದಿ ಗುಂಪುಗಳು ಜನರನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.

ಉಕ್ರೇನ್ ರಾಜಧಾನಿ ಕೀವ್ ನಾಜಿಗಳ ನಿಯಂತ್ರಣದಲ್ಲಿದೆ ಎಂದು ರಷ್ಯಾ ಪರಿಗಣಿಸುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ಪೆಸ್ಕೋವ್ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.