ADVERTISEMENT

ಭಾರತೀಯ ವಿದ್ಯಾರ್ಥಿಗಳು, ವಿದೇಶಿಗರ ಸ್ಥಳಾಂತರಕ್ಕೆ ಬಸ್‌ಗಳು ಸಿದ್ಧ: ರಷ್ಯಾ

ಪಿಟಿಐ
Published 3 ಮಾರ್ಚ್ 2022, 15:36 IST
Last Updated 3 ಮಾರ್ಚ್ 2022, 15:36 IST
ರಾಯಿಟರ್ಸ್ ಚಿತ್ರ
ರಾಯಿಟರ್ಸ್ ಚಿತ್ರ   

ಮಾಸ್ಕೋ: ಯುದ್ಧಪೀಡಿತ ಉಕ್ರೇನ್‌ನ ಹಾರ್ಕಿವ್, ಸುಮಿ ನಗರಗಳಲ್ಲಿ ಸಿಲುಕಿರುವ ಭಾರತೀಯರು ಮತ್ತು ಇತರ ವಿದೇಶಿಗರನ್ನು ರಷ್ಯಾದ ಬೆಲ್ಗೊರೋಡ್ ಪ್ರದೇಶಕ್ಕೆ ಸ್ಥಳಾಂತರಿಸಲು 130 ಬಸ್‌ಗಳು ಸಿದ್ಧವಾಗಿವೆ ಎಂದು ರಷ್ಯಾದ ಮಿಲಿಟರಿ ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.

ಉಕ್ರೇನ್‌ನ ಸಂಘರ್ಷದ ಪ್ರದೇಶಗಳಿಂದ ಭಾರತೀಯರ ಸುರಕ್ಷಿತ ಸ್ಥಳಾಂತರದ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತುಕತೆ ನಡೆಸಿದ ಒಂದು ದಿನದ ಬಳಿಕ ರಷ್ಯಾದ ರಾಷ್ಟ್ರೀಯ ರಕ್ಷಣಾ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಕಲೋನಲ್ ಜನರಲ್ ಮಿಖೈಲ್ ಮಿಜಿಂಟ್ಸೇವ್ ಈ ಹೇಳಿಕೆ ನೀಡಿದ್ದಾರೆ.

ಸುಮಾರು 8,000 ಭಾರತೀಯರು, ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಂಗಳವಾರ ಹೇಳಿದ್ದರು.

‘ಹಾರ್ಕಿವ್ ಮತ್ತು ಸುಮಿ ನಗರಗಳಿಗೆ ತೆರಳಿ ಭಾರತೀಯರು ಮತ್ತು ಇತರ ವಿದೇಶಿಗರನ್ನು ಕರೆತರಲು ಬೆಲ್ಗೊರೋಡ್ ಪ್ರದೇಶದ ನೆಖೊಟೆಯೆವ್ಕಾ ಮತ್ತು ಸುಡ್ಝಾ ಚೆಕ್ ಪಾಯಿಂಟ್‌ಗಳಲ್ಲಿ ಒಟ್ಟು 130 ಬಸ್‌ಗಳು ಸಜ್ಜಾಗಿವೆ’ ಎಂದು ಕಲೋನಲ್ ತಿಳಿಸಿದ್ದಾರೆ.

ಚೆಕ್ ಪಾಯಿಂಟ್‌ಗಳಲ್ಲಿ ತಾತ್ಕಾಲಿಕ ವಸತಿ ಮತ್ತು ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದ್ದು, ಬಿಸಿ ಊಟ, ಮೊಬೈಲ್ ಕ್ಲಿನಿಕ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಭಾರತ ಮತ್ತು ಇತರ ದೇಶಗಳ ಜನರನ್ನು ಸದ್ಯ ಬೆಲ್ಗೊರೋಡ್‌ಗೆ ಕರೆದೊಯ್ಯಲಾಗುತ್ತಿದ್ದು, ಅಲ್ಲಿಂದ ವಿಮಾನದ ಮೂಲಕ ಅವರ ದೇಶಗಳಿಗೆ ತಲುಪಿಸಲಾಗುವುದು’ ಎಂದು ಕಲೋನಲ್ ಜನರಲ್ ಮಿಖೈಲ್ ಮಿಜಿಂಟ್ಸೇವ್ ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕೆ ರಷ್ಯಾ, ರೊಮೇನಿಯಾ, ಪೋಲೆಂಡ್, ಹಂಗೇರಿ, ಸ್ಲೊವೇಕಿಯಾ ಮತ್ತು ಮಾಲ್ಡೊವಾ ದೇಶಗಳ ಜೊತೆ ಪರಿಣಾಮಕಾರಿ ಮಾತುಕತೆ ನಡೆಸುತ್ತಿರುವುದಾಗಿ ಗುರುವಾರ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದರು.

ರೊಮೇನಿಯಾ, ಹಂಗೇರಿ ಮತ್ತು ಪೋಲೆಂಡ್ ದೇಶಗಳ ಮೂಲಕ ಸದ್ಯ ವಿಶೇಷ ವಿಮಾನಗಳಲ್ಲಿ ಭಾರತೀಯರನ್ನು ಸ್ಥಳಾಂತರ ಮಾಡಲಾಗುತ್ತಿದೆ.

ಶೆಲ್ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಮೃತಪಟ್ಟ ಬಳಿಕ ಉಕ್ರೇನ್‌ನಿಂದ ಭಾರತೀಯರ ಸ್ಥಳಾಂತರಕ್ಕೆ ಸುರಕ್ಷಿತ ಮಾರ್ಗ ನಿರ್ಮಿಸುವಂತೆ ರಷ್ಯಾಗೆ ಭಾರತ ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.