ADVERTISEMENT

ಕಚ್ಚಾ ತೈಲ ಖರೀದಿ | ಭಾರತದ ಮೇಲೆ ಅಮೆರಿಕ ನಿರ್ಬಂಧ ನ್ಯಾಯಸಮ್ಮತವಲ್ಲ: ರಷ್ಯಾ

‘ಸವಾಲು ಎದುರಿಸಲು ನಮ್ಮ ಬಳಿ ವಿಶೇಷ ತಂತ್ರಗಾರಿಕೆ ಸಿದ್ಧವಿದೆ’

ಪಿಟಿಐ
Published 20 ಆಗಸ್ಟ್ 2025, 10:44 IST
Last Updated 20 ಆಗಸ್ಟ್ 2025, 10:44 IST
<div class="paragraphs"><p>ನರೇಂದ್ರ ಮೋದಿ ಮತ್ತು&nbsp;ವ್ಲಾದಿಮಿರ್ ಪುಟಿನ್‌</p></div>

ನರೇಂದ್ರ ಮೋದಿ ಮತ್ತು ವ್ಲಾದಿಮಿರ್ ಪುಟಿನ್‌

   

ನವದೆಹಲಿ: ‘ನಮ್ಮಿಂದ ಕಚ್ಚಾ ತೈಲ ಖರೀದಿ ಮಾಡುತ್ತಿರುವುದಕ್ಕೆ ಅಮೆರಿಕವು ಹೆಚ್ಚಿನ ಪ್ರಮಾಣದ ಸುಂಕ ವಿಧಿಸಿ ಭಾರತವನ್ನು ಶಿಕ್ಷಿಸಲು ಮುಂದಾಗಿದೆ. ಅಮೆರಿಕದ ಈ ಕ್ರಮದಿಂದ ಎದುರಾಗುವ ಯಾವುದೇ ಸವಾಲು ಎದುರಿಸಲು ರಷ್ಯಾದ ಬಳಿ ‘ವಿಶೇಷ ತಂತ್ರಗಾರಿಕೆ’ ಸಿದ್ಧವಿದೆ’ ಎಂದು ಭಾರತದಲ್ಲಿರುವ ರಷ್ಯಾದ ರಾಯಭಾರಿ ರೋಮನ್‌ ಬಬೂಷ್ಕೆನ್‌ ಅವರು ಬುಧವಾರ ಹೇಳಿದರು.

ಇಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಸೇನೆ ಅಥವಾ ಹಾರ್ಡ್‌ವೇರ್‌ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಷ್ಯಾದ ಜೊತೆ ಭಾರತವು ವ್ಯಾಪಾರ ಸಂಬಂಧ ಹೊಂದಿದೆ. ಎರಡೂ ದೇಶಗಳ ಸಂಬಂಧವು ಇನ್ನಷ್ಟು ಹತ್ತಿರಗೊಳ್ಳುತ್ತಿದೆ. ಆದ್ದರಿಂದ, ರಷ್ಯಾವೇ ಬೇಕು ಎನ್ನುವುದು ಭಾರತದ ಆಯ್ಕೆ’ ಎಂದರು.

ADVERTISEMENT

‘ಭಾರತದ ಮೇಲೆ ಅಮೆರಿಕವು ತೆಗೆದುಕೊಂಡ ಕ್ರಮವು ನ್ಯಾಯ ಸಮ್ಮತವಾಗಿಲ್ಲ. ಇದು ಭಾರತಕ್ಕೆ ಸವಾಲಿನ ಸಂದರ್ಭ. ನಮ್ಮ ಇಂಧನ ಒಪ್ಪಂದದ ಸಂಬಂಧ ಎದುರಾಗುವ ಯಾವುದೇ ಸವಾಲನ್ನು ಎದುರಿಸಲು ನಾವು ಬದ್ಧರಾಗಿದ್ದೇವೆ. ಯಾವುದೇ ಬಾಹ್ಯ ಒತ್ತಡಕ್ಕೂ ಮಣಿಯದೆಯೇ ಎರಡೂ ದೇಶಗಳ ಮಧ್ಯದ ಇಂಧನ ಕ್ಷೇತ್ರದ ಕುರಿತ ನಮ್ಮ ಸಹಕಾರವು ಮುಂದುವರಿಯಲಿದೆ ಎಂಬ ವಿಶ್ವಾಸವಿದೆ’ ಎಂದರು. 

‘ಅತಿ ಶೀಘ್ರವಾಗಿ ನಾವು, ಭಾರತ ಮತ್ತು ಚೀನಾ ತ್ರಿಪಕ್ಷೀಯ ಸಭೆಯೊಂದನ್ನು ನಡೆಸಲಿದ್ದೇವೆ. ಈ ವರ್ಷದ ಕೊನೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.