ADVERTISEMENT

ರಷ್ಯಾದಿಂದ ಭಾರಿ ಕ್ಷಿಪಣಿ ದಾಳಿ; ಉಕ್ರೇನ್‌ ಸೇನೆ ಪ್ರತಿ ದಾಳಿ

ಒಂದು ಸಾವಿರ ಮೀಟರ್‌ ಉದ್ಧದ ಸೇತುವೆಗೆ ತೀವ್ರ ಹಾನಿ; ಐವರು ನಾಗರಿಕರು ಹತ

ಏಜೆನ್ಸೀಸ್
Published 28 ಜುಲೈ 2022, 14:00 IST
Last Updated 28 ಜುಲೈ 2022, 14:00 IST
   

ಕೀವ್‌:ರಷ್ಯಾ ಪಡೆಗಳು ಗುರುವಾರ ಉಕ್ರೇನ್‌ ರಾಜಧಾನಿ ಕೀವ್ ಮತ್ತು ಚೆರ್ನಿವ್‌ ಪ್ರದೇಶಗಳ ಮೇಲೆ ಭಾರಿ ಕ್ಷಿಪಣಿ ದಾಳಿ ನಡೆಸಿವೆ. ಇದರ ಬೆನ್ನಲ್ಲೆ, ರಷ್ಯಾ ಆಕ್ರಮಿಸಿರುವ ದಕ್ಷಿಣ ಪ್ರದೇಶದ ವಿಮೋಚನೆಗೆ ಕಾರ್ಯಾಚರಣೆ ನಡೆಸುವುದಾಗಿ ಉಕ್ರೇನ್‌ ಸೇನೆಯ ಅಧಿಕಾರಿಗಳು ಘೋಷಿಸಿದರು.

ಕೀವ್‌ ಪ್ರಾದೇಶಿಕ ಗವರ್ನರ್‌ ಒಲೆಕ್ಸಿ ಕುಲೆಬಾ ಅವರು, ‘ಗುರುವಾರ ಬೆಳಿಗ್ಗೆ ವಿಷ್‌ಗೊರೊಡ್‌ ಜಿಲ್ಲೆಯ ಹಳ್ಳಿ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಸಾವು– ನೋವಿನ ಬಗ್ಗೆ ತಕ್ಷಣದ ಮಾಹಿತಿ ಲಭಿಸಿಲ್ಲ’ ಎಂದು ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.

‘ಬೆಲರೂಸ್‌ ಗಡಿಗೆ ಹತ್ತಿರದ ಹೊಂಚಾರಿವ್‌ಸ್ಕಾ ಹಳ್ಳಿ ಮೇಲೆ ಹಲವು ಕ್ಷಿಪಣಿಗಳು ಅಪ್ಪಳಿಸಿವೆ’ ಎಂದು ಚೆರ್ನಿವ್‌ ಗವರ್ನರ್‌ ವಿಚೆಸ್ಲಾವ್‌ ಚಾಸ್‌ ತಿಳಿಸಿದ್ದಾರೆ.

ADVERTISEMENT

ಉಕ್ರೇನ್‌ ಸೇನೆಯು, ರಷ್ಯಾದ ವಿರುದ್ಧ ಪ್ರತಿ ದಾಳಿ ಮುಂದುವರಿಸಿದೆ. ರಷ್ಯಾ ಆಕ್ರಮಿತ ಕೆರ್ಸಾನ್‌ ಪ್ರದೇಶದ ನೀಪರ್‌ ನದಿಯ ಸೇತುವೆ ಗುರಿಯಾಗಿಸಿ ದಾಳಿ ಮಾಡಿದೆ.ದೂರಗಾಮಿ ಶಸ್ತ್ರಾಸ್ತ್ರಗಳಿಂದ ನೀಪರ್‌ ನದಿಯ ಮೂರು ಸೇತುವೆಗಳಿಗೆ ತೀವ್ರ ಹಾನಿ ಮಾಡಲಾಗಿದೆ. ಒಂದು ಸಾವಿರ ಮೀಟರ್‌ ಉದ್ದದ ಅಂಟೊನಿವ್‌ಸ್ಕಿ ಸೇತುವೆ ಬಳಸಲಾಗದಂತೆ ಹಾನಿಗೊಳಿಸಲಾಗಿದೆ ಎಂದು ಬ್ರಿಟನ್‌ ರಕ್ಷಣಾ ಸಚಿವಾಲಯ ಹೇಳಿದೆ.

ಕಳೆದ 24 ತಾಸುಗಳಲ್ಲಿ ಡೊನೆಟ್‌ಸ್ಕ್‌ ಪ್ರದೇಶದ ನಗರ ಮತ್ತು ಹಳ್ಳಿಗಳ ಮೇಲೆ ರಷ್ಯಾದ ಶೆಲ್‌ ದಾಳಿಗೆ ಐವರು ನಾಗರಿಕರು ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷರ ಕಚೇರಿಗುರುವಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.