ADVERTISEMENT

ಎಸ್‌–400 ಮೂರನೇ ರೆಜೆಮೆಂಟ್‌ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ: ರಷ್ಯಾ ರಾಯಭಾರಿ

ಪಿಟಿಐ
Published 7 ಫೆಬ್ರುವರಿ 2023, 2:33 IST
Last Updated 7 ಫೆಬ್ರುವರಿ 2023, 2:33 IST
   

ನವದೆಹಲಿ : ಎಸ್‌–400 ಟ್ರಯಂಫ್‌ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ವ್ಯವಸ್ಥೆಗಳ ಮೂರನೇ ರೆಜಿಮೆಂಟ್‌ನ ಪೂರೈಕೆ ಕುರಿತು ಇರುವ ಒಪ್ಪಂದಕ್ಕೆ ಎರಡೂ ದೇಶಗಳು ಬದ್ಧವಾಗಿದ್ದು, ಶೀಘ್ರದಲ್ಲೇ ಭಾರತಕ್ಕೆ ಕ್ಷಿಪಣಿ ಪೂರೈಕೆ ಆಗಲಿದೆ ಎಂದು ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ಸೋಮವಾರ ಹೇಳಿದ್ಧಾರೆ.

ಭಾರತ-ರಷ್ಯಾ ಬಾಂಧವ್ಯ ಕುರಿತ ಸಮ್ಮೇಳನದಲ್ಲಿ ಕ್ಷಿಪಣಿ ವ್ಯವಸ್ಥೆ ಪೂರೈಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ರಷ್ಯಾ ಈಗಾಗಲೇ ಕ್ಷಿಪಣಿ ವ್ಯವಸ್ಥೆಗಳ ಮೊದಲ ಎರಡು ರೆಜಿಮೆಂಟ್‌ಗಳ ಪೂರೈಕೆಯನ್ನು ಪೂರ್ಣಗೊಳಿಸಿದೆ. ಮೂರನೇ ರೆಜೆಮೆಂಟ್‌ ಪೂರೈಕೆಗೆ ಯಾವುದೇ ಅಡೆ–ತಡೆ ಇಲ್ಲ. ಶೀಘ್ರದಲ್ಲೇ ಒಪ್ಪಂದ ಪೂರ್ಣಗೊಳ್ಳಲಿದೆ’ ಎಂದಿದ್ದಾರೆ.

ಅಕ್ಟೋಬರ್ 2018 ರಲ್ಲಿ, ಎಸ್‌-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಐದು ಘಟಕಗಳನ್ನು ಖರೀದಿಸಲು ಭಾರತವು ರಷ್ಯಾದೊಂದಿಗೆ 5 ಶತಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು.

ADVERTISEMENT

ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಭಾರತದ ಪಾತ್ರವನ್ನು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಲಿಪೋವ್‌, ‘ರಾಜತಾಂತ್ರಿಕವಾಗಿ ಅದನ್ನು ಕೊನೆಗೊಳಿಸುವ ಯಾವುದೇ ಗಂಭೀರ ಮಾತುಕತೆಗೆ ಮಾಸ್ಕೋ ಮುಕ್ತವಾಗಿದೆ. ಭಾರತ ಅದರಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲು ಬಯಸಿದರೆ, ನಾವು ಖಂಡಿತವಾಗಿಯೂ ಭಾರತದ ಮಾತನ್ನು ಅತ್ಯಂತ ಗಂಭೀರ ರೀತಿಯಲ್ಲಿ ಪರಿಶೀಲಿಸುತ್ತೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.