ಡೊನಾಲ್ಡ್ ಟ್ರಂಪ್, ವ್ಲಾಡಿಮಿರ್ ಪುಟಿನ್
ರಾಯಿಟರ್ಸ್ ಸಂಗ್ರಹ ಚಿತ್ರ
ಅಂಕೊರೇಜ್ (ಅಲಾಸ್ಕ): ಉಕ್ರೇನ್–ರಷ್ಯಾ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಲಾಸ್ಕದಲ್ಲಿ ನಡೆಸಿದ ಸಭೆಯು ಯಾವುದೇ ಒಪ್ಪಂದದ ಘೋಷಣೆಯಿಲ್ಲದೆ ಕೊನೆಯಾಗಿದೆ.
ಅಂಕೊರೇಜ್‌ನಲ್ಲಿ ಅಮೆರಿಕದ ಸೇನಾ ಮೂಲಸೌಕರ್ಯವಿರುವ ಜಾಯಿಂಟ್ ಬೇಸ್ ಎಲ್ಮೆಂಡಾರ್ಫ್–ರಿಚರ್ಡ್‌ಸನ್‌ನಲ್ಲಿ (ಜೆಬಿಇಆರ್) ಸುಮಾರು ಮೂರು ತಾಸು ನಡೆದ ಸಭೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಟ್ರಂಪ್, ಕೆಲವು ಅಸ್ಪಷ್ಟ ಆದರೆ, ಸಕಾರಾತ್ಮಕ ಮಾತುಗಳನ್ನಾಡಿದ್ದಾರೆ. 'ಹಲವು ವಿಚಾರಗಳನ್ನು ಒಪ್ಪಲಾಗಿದೆ. ಇನ್ನೂ ಕೆಲವು ಹಾಗೆಯೇ ಉಳಿದಿವೆ' ಎಂದು ಹೇಳಿದ್ದಾರೆ. ಆದರೆ, ಒಪ್ಪಲಾದ ಅಂಶಗಳು ಯಾವುವು, ಅವು ಉಕ್ರೇನ್‌ಗೆ ಸಂಬಂಧಿಸಿದವೇ? ಎಂಬದನ್ನು ಸ್ಪಷ್ಟವಾಗಿ ಹೇಳಿಲ್ಲ.
'ಒಂದಿಷ್ಟು ಪ್ರಗತಿ ಸಾಧಿಸಿದ್ದೇವೆ' ಎಂದ ಅವರು, 'ಗುರಿ ಸಾಧನೆ ಆಗುವವರೆಗೆ ಸಂಪೂರ್ಣ ಒಪ್ಪಂದವಾಗವುದಿಲ್ಲ' ಎಂದು ನೇರವಾಗಿ ಹೇಳಿದ್ದಾರೆ.
ಅದಕ್ಕೂ ಮುನ್ನ ಪುಟಿನ್, 'ದೇಶದ ಭದ್ರತೆಗೆ ಆತಂಕವಿರುವುದರಿಂದ ಉಕ್ರೇನ್‌ಗೆ ಸಂಬಂಧಿಸಿದಂತೆ ನಮ್ಮ ನಿಲುವು ಬದಲಾಗುವುದಿಲ್ಲ' ಎಂದು ಖಚಿತಪಡಿಸಿದ್ದಾರೆ.
'ಮಾತುಕತೆಯು ಶಾಶ್ವತ ಹಾಗೂ ದೀರ್ಘಕಾಲೀನವಾಗಿಸಬೇಕಾದರೆ, ಸಂಘರ್ಷಕ್ಕೆ ಕಾರಣವಾದ ಎಲ್ಲ ಅಂಶಗಳನ್ನೂ ಸರಿಪಡಿಸಬೇಕಿದೆ ಎಂಬುದು ನಮಗೆ ಮನವರಿಕೆಯಾಗಿದೆ' ಎಂದಿದ್ದಾರೆ. ಆ ಮೂಲಕ, ಉಕ್ರೇನ್ ಮತ್ತು ಅದರ ಪ್ರದೇಶ ಪಶ್ಚಿಮದ ಭಾಗವಾಗುವುದನ್ನು ಒಪ್ಪಲಾಗದು ಎಂಬ ರಷ್ಯಾ ನಿಲುವನ್ನು ಪುನರುಚ್ಚರಿಸಿದ್ದಾರೆ.
2022ರ ಸೆಪ್ಟೆಂಬರ್‌ನಲ್ಲಿ ತಾನು ಅತಿಕ್ರಮಿಸಿರುವ ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನು ಉಕ್ರೇನ್ ಸಂಪೂರ್ಣವಾಗಿ ಬಿಟ್ಟುಕೊಡಬೇಕು. ನ್ಯಾಟೊ ಸೇರುವ ನಿರ್ಧಾರದಿಂದ ಉಕ್ರೇನ್ ಹಿಂದೆ ಸರಿಯಬೇಕು ಹಾಗೂ ಉಕ್ರೇನ್ ಸೇನೆ ಮೇಲೆ ತಾನು ಸಾಧಿಸಿರುವ ಹಿಡಿತವನ್ನು ಒಪ್ಪಿಕೊಳ್ಳಬೇಕು ಎಂಬುದಾಗಿ ಸಂಘರ್ಷ ಆರಂಭವಾದಾಗಿನಿಂದಲೂ ರಷ್ಯಾ ಒತ್ತಾಯಿಸುತ್ತಾ ಬಂದಿದೆ.
ಟ್ರಂಪ್ ಜೊತೆಗಿನ ಮಾತುಕತೆಯ ಬಗ್ಗೆ ಹೆಚ್ಚೇನೂ ಹೇಳದೆ ಪರೋಕ್ಷವಾಗಿ ಉಲ್ಲೇಖಿಸಿದ ಪುಟಿನ್, 'ಉಕ್ರೇನ್ ಮತ್ತು ಯುರೋಪ್ ರಾಷ್ಟ್ರಗಳು ಅದನ್ನು (ಮಾತುಕತೆಯನ್ನು) ರಚನಾತ್ಮಕವಾಗಿ ಗ್ರಹಿಸುತ್ತವೆ. ನಮ್ಮ ಕೆಲಸಗಳಿಗೆ ಅಡ್ಡಿಯಾಗುವುದಿಲ್ಲ ಎಂದು ನಿರೀಕ್ಷಿಸುತ್ತೇವೆ' ಎಂದಿದ್ದಾರೆ.
2022ರಲ್ಲಿ ತಾವು ಅಧಿಕಾರದಲ್ಲಿ ಇದ್ದಿದ್ದರೆ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಲು ಬಿಡುತ್ತಿರಲಿಲ್ಲ ಎಂಬ ಟ್ರಂಪ್ ಮಾತನ್ನು ಪುಟಿನ್ ಅನುಮೋದಿಸಿದ್ದಾರೆ.
'ಆಗ ತಾವು ಅಧ್ಯಕ್ಷರಾಗಿದ್ದರೆ ಯುದ್ಧ ನಡೆಯುತ್ತಿರಲಿಲ್ಲ ಎಂದು ಟ್ರಂಪ್ ಇಂದು ಹೇಳಿದ್ದಾರೆ. ಹೌದು ಹಾಗೆಯೇ ಅಗುತ್ತಿತ್ತು. ಅದನ್ನು ನಾನು ಖಚಿತಪಡಿಸಬಲ್ಲೆ' ಎಂದಿದ್ದಾರೆ.
ಪುಟಿನ್ ಜೊತೆಗಿನ ಸಭೆಯಲ್ಲಿ ಏನೆಲ್ಲ ಆಗಿದೆ ಎಂಬುದನ್ನು ತಿಳಿಸಲು ನ್ಯಾಟೊ ನಾಯಕರು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮತ್ತು ಇತರ ನಾಯಕರ ಸಭೆ ಕರೆಯಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ. ಹಾಗೆಯೇ, 'ಬಹುಶಃ ಶೀಘ್ರದಲ್ಲೇ ನಿಮ್ಮನ್ನೂ ಭೇಟಿಯಾಗುತ್ತೇನೆ' ಎಂದು ಪತ್ರಕರ್ತರನ್ನುದ್ದೇಶಿಸಿ ಹೇಳಿದ್ದಾರೆ.
ಆಗ ಪುಟಿನ್, 'ಮುಂದಿನ ಬಾರಿ ಮಾಸ್ಕೊದಲ್ಲಿ' ಎಂದರು. ಆಗ ಟ್ರಂಪ್, 'ಇದು ಆಸಕ್ತಿದಾಯಕ ವಿಚಾರ. ಹಾಗೆ ಆಗುವ ಸಾಧ್ಯತೆಯೂ ಇದೆ' ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.