ADVERTISEMENT

ಉಕ್ರೇನ್‌ನಲ್ಲಿ ಆಕ್ರಮಣ ಮುಂದುವರಿಸುವಂತೆ ರಷ್ಯಾ ಅಧ್ಯಕ್ಷ ಪುಟಿನ್ ಆದೇಶ

ಏಜೆನ್ಸೀಸ್
Published 4 ಜುಲೈ 2022, 12:24 IST
Last Updated 4 ಜುಲೈ 2022, 12:24 IST
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌   

ಮಾಸ್ಕೊ: ರಷ್ಯಾ ಸೇನೆ ಉಕ್ರೇನ್‌ನ ಲುಗಾನ್‌ಸ್ಕ್‌ ಪ್ರಾಂತ್ಯವನ್ನು ಸಂಪೂರ್ಣ ವಶಕ್ಕೆ ಪಡೆದಿದೆ. ಆದಾಗ್ಯೂ, ಆಕ್ರಮಣ ಮುಂದುವರಿಸುವಂತೆ ರಕ್ಷಣಾ ಸಚಿವಸೆರ್ಗೀ ಶೋಯಿಗು ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಆದೇಶಿಸಿದ್ದಾರೆ.

'ಪೂರ್ವ ಮತ್ತು ಪಶ್ಚಿಮದಲ್ಲಿರುವ ಗುಂಪುಗಳೂ ಸೇರಿದಂತೆ ಸೇನಾ ಪಡೆಗಳು ಈಗಾಗಲೇ ನಿಗದಿಯಾಗಿರುವ ಯೋಜನೆಯಂತೆ ತಮ್ಮ ಕಾರ್ಯ ಪೂರ್ಣಗೊಳಿಸಬೇಕು. ಲುಗಾನ್‌ಸ್ಕ್‌ನಲ್ಲಿ ಇದುವರೆಗೆ ಆಗಿರುವಂತೆ, ಮುಂದಿಯೂ ಅವರದೇ (ರಷ್ಯಾ ಯೋಧರ) ದಿಕ್ಕಿನಲ್ಲಿ ಎಲ್ಲವೂ ನಡೆಯಲಿವೆ ಎಂದು ಭಾವಿಸಿದ್ದೇನೆ' ಎಂದುಶೋಯಿಗುಅವರಿಗೆ ಪುಟಿನ್‌ ಹೇಳಿದ್ದಾರೆ.

ರಷ್ಯಾ ಪಡೆಗಳು ಲುಗಾನ್‌ಸ್ಕ್‌ ಪ್ರಾಂತ್ಯವನ್ನು ಸಂಪೂರ್ಣ ಹಿಡಿತಕ್ಕೆ ಪಡೆದಿವೆ. ಇದು ಉಕ್ರೇನ್‌ನಲ್ಲಿ ಆಕ್ರಮಣ ಆರಂಭಿಸಿದ ನಾಲ್ಕು ತಿಂಗಳ ಬಳಿಕ ದೊರೆತ ದೊಡ್ಡ ಜಯವಾಗಿದೆ ಎಂದು ಶೋಯಿಗು ಅವರು ಪುಟಿನ್‌ಗೆ ಈ ವಾರಾಂತ್ಯದಲ್ಲಿ ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪುಟಿನ್‌,ಯೋಧರುಲುಗಾನ್‌ಸ್ಕ್‌ನಲ್ಲಿ ವಿಶ್ರಾಂತಿ ಪಡೆಯಬೇಕು ಮತ್ತು ಯುದ್ಧ ಸಾಮರ್ಥ್ಯವನ್ನು ಮರು ಸಂಘಟಿಸಿಕೊಳ್ಳಬೇಕು ಎಂದು ಸೂಚಿಸಿದ್ದರು.

ರಷ್ಯಾ ಪಡೆ ಆರಂಭದಲ್ಲಿ ಉಕ್ರೇನ್‌ನರಾಜಧಾನಿ ಕೀವ್‌ ನಗರವನ್ನು ವಶಪಡಿಸಿಕೊಳ್ಳುವ ಯೋಜನೆ ಹಾಕಿಕೊಂಡಿತ್ತು. ಆದರೆ, ಉಕ್ರೇನ್‌ ಪಡೆಗಳಿಂದ ಪ್ರಬಲ ಪ್ರತಿರೋಧ ವ್ಯಕ್ತವಾಗಿತ್ತು. ಹೀಗಾಗಿ, ತನ್ನ ಗುರಿ ಬದಲಿಸಿಕೊಂಡ ರಷ್ಯಾ ಸೇನೆ, ಪೂರ್ವ ಉಕ್ರೇನ್‌ನ ಡೊನೆಟ್‌ಸ್ಕ್‌ ಮತ್ತು ಲುಗಾನ್‌ಸ್ಕ್‌ ಪ್ರಾಂತ್ಯಗಳ ಮೇಲೆ ದಾಳಿ ಆರಂಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.