ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಭೆ
(ಪಿಟಿಐ ಚಿತ್ರ)
ಚಿಂಗ್ಡವ್: ಚೀನಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಭೆಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಭಯೋತ್ಪಾದನೆ ವಿರುದ್ಧ ಭಾರತ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
'ಭಯೋತ್ಪಾದನೆಗೆ ಆರ್ಥಿಕ ಸೇರಿದಂತೆ ನೆರವನ್ನು ಒದಗಿಸುವವರನ್ನು ಎದುರಿಸುವಲ್ಲಿ ಎರಡು ಮಾನದಂಡಗಳು ಇರಬಾರದು. ಭಯೋತ್ಪಾದಕರ ಪ್ರಾಯೋಜಕರನ್ನು ಹೊಣೆಗಾರರನ್ನಾಗಿಸಬೇಕು' ಎಂದು ಅವರು ಒತ್ತಿ ಹೇಳಿದ್ದಾರೆ.
ಎಸ್‌ಸಿಒ ರಕ್ಷಣಾ ಸಚಿವರ ಸಮಾವೇಶದಲ್ಲಿ ಚೀನಾದ ಬಂದರು ನಗರವಾದ ಚಿಂಗ್ಡವ್‌ಗೆ ಬಂದಿಳಿದ ರಾಜನಾಥ ಸಿಂಗ್, ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ಕೆಲವು ದೇಶಗಳು ಭಯೋತ್ಪಾದಕರಿಗೆ ಆಶ್ರಯ ನೀಡಲು ಗಡಿಯಾಚೆಗಿನ ಭಯೋತ್ಪಾದನೆಯನ್ನು ವಿಧಾನವಾಗಿ ಬಳಸುತ್ತಿವೆ. ಭಯೋತ್ಪಾದನೆ ಮತ್ತು ಶಾಂತಿ ಹಾಗೂ ಅಭಿವೃದ್ಧಿ ಒಟ್ಟಿಗೆ ಇರಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
'ಹೆಚ್ಚುತ್ತಿರುವ ಮೂಲಭೂತವಾದ, ಉಗ್ರವಾದ ಮತ್ತು ಭಯೋತ್ಪಾದನೆ ಈ ಸಮಸ್ಯೆಗಳಿಗೆ ಕಾರಣವಾಗಿವೆ. ಈ ಎಲ್ಲ ಸವಾಲುಗಳನ್ನು ಎದುರಿಸಲು ಕಠಿಣ ಕ್ರಮದ ಅಗತ್ಯವಿದೆ. ಈ ಹೋರಾಟದಲ್ಲಿ ನಾವೆಲ್ಲರೂ ಒಂದಾಗಬೇಕು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.