ADVERTISEMENT

ಶೇಖ್ ಹಸೀನಾಗೆ ಶಿಕ್ಷೆ: ಸತ್ಯದ ಆಧಾರದ ಮೇಲಲ್ಲ; ಇಸ್ಕಾನ್ ಪುರೋಹಿತರ ಪರ ವಕೀಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2025, 2:49 IST
Last Updated 18 ನವೆಂಬರ್ 2025, 2:49 IST
ಶೇಖ್ ಹಸೀನಾ (ಪಿಟಿಐ ಸಂಗ್ರಹ ಚಿತ್ರ)
ಶೇಖ್ ಹಸೀನಾ (ಪಿಟಿಐ ಸಂಗ್ರಹ ಚಿತ್ರ)   

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಮರಣ ದಂಡನೆ ವಿಧಿಸಿರುವ ನ್ಯಾಯಮಂಡಳಿಯು ಸತ್ಯದ ಆಧಾರದ ಮೇಲೆ ತೀರ್ಪು ನೀಡಿಲ್ಲ ಎಂದು ಇಸ್ಕಾನ್‌ನ ಪುರೋಹಿತ ಚಿನ್ಮಯಿ ಕೃಷ್ಣದಾಸ್ ಅವರ ವಕೀಲ ರವೀಂದ್ರನಾಥ್ ಘೋಷ್ ಹೇಳಿದ್ದಾರೆ.

2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ದಂಗೆಯ ಸಂದರ್ಭದಲ್ಲಿ ಅಲ್ಲಿನ ಆಗಿನ ಪ್ರಧಾನಿ ಶೇಖ್‌ ಹಸೀನಾ ‘ಮಾನವೀಯತೆ ವಿರುದ್ಧ ಅಪರಾಧ ಎಸಗಿದ್ದಾರೆ’ ಎಂದು ತೀರ್ಮಾನಿಸಿರುವ ಬಾಂಗ್ಲಾದೇಶದಲ್ಲಿರುವ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು, 78 ವರ್ಷದ ಹಸೀನಾ ಅವರಿಗೆ ಸೋಮವಾರ ಮರಣ ದಂಡನೆ ವಿಧಿಸಿದೆ.

‘ಶೇಖ್ ಹಸೀನಾ ಅವರ ಬಗ್ಗೆ ನನಗೆ ಬಹಳ ಚೆನ್ನಾಗಿ ಗೊತ್ತಿದೆ. ಬಾಂಗ್ಲಾದೇಶ ಎಲ್ಲ ರಾಜಕೀಯ ನಾಯಕರ ಬಗ್ಗೆ ಗೊತ್ತಿದೆ. ನ್ಯಾಯಮಂಡಳಿ ನೀಡಿದ ತೀರ್ಪು ಪ್ರಕರಣದ ಸತ್ಯ ಮತ್ತು ಸಂದರ್ಭಗಳನ್ನು ಆಧರಿಸಿಲ್ಲ. ಮೇಲ್ಮನವಿ ನ್ಯಾಯಾಲಯಕ್ಕೆ ನನ್ನ ವಿನಮ್ರ ಮನವಿ ಏನೆಂದರೆ, ಈ ವಿಷಯವನ್ನು ತಕ್ಷಣವೇ ಪರಿಶೀಲಿಸಬೇಕು. ಮರಣದಂಡನೆ ಪ್ರಕರಣದಲ್ಲಿ, ಆರೋಪಿಯ ವಕೀಲರು ಮತ್ತು ಪ್ರಾಸಿಕ್ಯೂಷನ್ ಪಾಟಿಸವಾಲು ಮಾಡಬೇಕು. ಯಾವುದೇ ಪಾಟಿಸವಾಲು ಇಲ್ಲದೆ, ಮರಣದಂಡನೆ ಅದು ಹೇಗೆ ಸಾಧ್ಯ?‘ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

ಬಾಂಗ್ಲಾದೇಶದಲ್ಲಿರುವ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಿರುವುದು ಗಮನದಲ್ಲಿದೆ. ಬಾಂಗ್ಲಾದೇಶ ಜನರ ಹಿತಾಸಕ್ತಿಗೆ ಬದ್ಧವಾಗಿರುವುದಾಗಿ ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಭಾರತವು ಎಲ್ಲ ಮೈತ್ರಿ ದೇಶಗಳೊಂದಿಗೆ ರಚನಾತ್ಮಕವಾಗಿರಲಿದೆ ಎಂದಿದೆ.

ಆಗಸ್ಟ್‌ 5ರಂದು ಢಾಕಾದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಆರು ಮಂದಿ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಲು ಮತ್ತು ಅವರ ಹತ್ಯೆ ಮಾಡಲು ಆದೇಶ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಹಸೀನಾ ಅವರಿಗೆ ಮರಣ ದಂಡನೆ ವಿಧಿಸಲಾಗಿದೆ.

ಹಸೀನಾ ವಿರುದ್ಧ ದಾಖಲಾಗಿದ್ದ ಐದೂ ಆರೋಪಗಳಲ್ಲೂ ಅವರು ದೋಷಿ ಎಂದು ಸಾಬೀತಾಗಿದೆ ಎಂಬುದಾಗಿ ನ್ಯಾಯಮಂಡಳಿ ಹೇಳಿದೆ.

‘ಹಸೀನಾ ಅವರೇ ಪ್ರತಿಭಟನೆಯನ್ನು ದಮನ ಮಾಡುವ ಸಲುವಾಗಿ ನಡೆಸಿದ ಹಿಂಸೆಯ ‘ಮಾಸ್ಟರ್‌ಮೈಂಡ್‌’ ಆಗಿದ್ದಾರೆ. ಹಸೀನಾ ಅವರೇ ತಪ್ಪಿತಸ್ಥರು ಎಂಬುದನ್ನು ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ಸಾಬೀತು ಮಾಡಲಾಗಿದೆ’ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.

ಜನಾದೇಶವನ್ನೇ ಪಡೆಯದ ಸರ್ಕಾರವು ಈ ನ್ಯಾಯಮಂಡಳಿಯನ್ನು ರಚಿಸಿದೆ. ಇಂಥ ಮೋಸದ ನ್ಯಾಯಮಂಡಳಿಯು ನೀಡಿದ ತೀರ್ಪು ಇದು. ಈ ತೀರ್ಪು ರಾಜಕೀಯ ಪ್ರೇರಿತವಾಗಿದ್ದು, ಪಕ್ಷಪಾತಿಯಾಗಿದೆ. ಮರಣದಂಡನೆ ವಿಧಿಸಿರುವುದು ಅಸಹ್ಯಕರ. ಜನರಿಂದ ಆಯ್ಕೆಯಾಗಿದ್ದ ಪ್ರಧಾನಿಯೊಬ್ಬರನ್ನು ಮತ್ತು ಅವಾಮಿ ಲೀಗ್‌ ಪಕ್ಷವನ್ನು ಅಳಿಸಿ ಹಾಕುವ ಉದ್ದೇಶವು ಮಧ್ಯಂತರ ಸರ್ಕಾರಕ್ಕಿದೆ ಎಂಬುದನ್ನು ಇದು ತೋರಿಸುತ್ತದೆ. ಎಲ್ಲ ಸಾಕ್ಷ್ಯಗಳನ್ನು ನ್ಯಾಯಯುತವಾಗಿ ತುಲನೆ ಮಾಡುವ ನ್ಯಾಯಮಂಡಳಿಯ ಮುಂದೆ ನನ್ನ ಮೇಲೆ ಆರೋಪ ಹೊರಿಸಿದವರನ್ನು ಎದುರಿಸಲು ನಾನು ಭಯಪಡುವುದಿಲ್ಲ ಎಂದು ಶೇಖ್ ಹಸೀನಾ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.