ADVERTISEMENT

ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾಕ್ಕೆ ನಿಷೇಧ 

ಏಜೆನ್ಸೀಸ್
Published 29 ಏಪ್ರಿಲ್ 2019, 18:48 IST
Last Updated 29 ಏಪ್ರಿಲ್ 2019, 18:48 IST
   

ಕೊಲೊಂಬೋ: ನಿರಂತರ ಬಾಂಬ್‌ ದಾಳಿಯಿಂದಾಗಿ ನಲುಗಿ ಹೋಗಿರುವ ಶ್ರೀಲಂಕಾ ಭದ್ರತಾ ದೃಷ್ಟಿಯಿಂದಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೇ ಕಾರಣಕ್ಕಾಗಿ ಬುರ್ಖಾ ತೊಡುವುದನ್ನೂ ನಿಷೇಧಿಸಿದೆ.

‘ಬುರ್ಖಾ ತೊಡುವುದರಿಂದ ಭದ್ರತೆಗೆ ತೊಡಕಾಗುತ್ತಿದೆ. ಅಲ್ಲದೆ, ಅದುಮೂಲಭೂತವಾದದ ಸಂಕೇತವಾಗುತ್ತಿದೆ’ ಎಂದಿರುವ ಶ್ರೀಲಂಕಾದ ಅಧ್ಯಕ್ಷರು ಇಂದಿನಿಂದ ಬುರ್ಖಾಕ್ಕೆ ನಿಷೇಧ ವಿಧಿಸಿದ್ದಾರೆ.

‘ದೇಶದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲು, ದುಷ್ಕರ್ಮಿಗಳ ಗುರುತು ಪತ್ತೆ ಮಾಡುವ ಸಲುವಾಗಿ ಅಧ್ಯಕ್ಷರು ಈ ಕ್ರಮ ಕೈಗೊಂಡಿದ್ದಾರೆ. ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ಯಾವೊಂದು ಅವಕಾಶವೂ ಸಿಗದಂತೆ ಮಾಡಲು ಹೀಗೆ ಮಾಡಲಾಗಿದೆ. ಸೋಮವಾರದಿಂದಲೇ ಬುರ್ಖಾಗಳ ಮೇಲೆ ನಿಷೇಧ ಜಾರಿಯಾಗಲಿದೆ,’ ಎಂದು ಅಧ್ಯಕ್ಷರ ಕಚೇರಿಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ನಡುವೆ ತನಿಖಾ ಪಡೆಗಳು ಶ್ರೀಲಂಕಾದ ಸ್ಥಳೀಯ ಉಗ್ರ ಮೂಲಭೂತವಾದಿ ಸಂಘಟನೆಯಾದ ನ್ಯಾಷನಲ್‌ ತವ್ಹೀದ್‌ ಜಮಾತ್‌ ಸಂಘಟನೆ ಮೇಲೆ ದಾಳಿಯ ಕುರಿತಾಗಿ ಅನುಮಾನವಿಟ್ಟುಕೊಂಡಿವೆ. ಆದರೆ, ಐಎಸ್‌ಐಎಸ್‌ ಸಂಘಟನೆ ಈಗಾಗಲೇ ದಾಳಿಯ ಹೊಣೆ ಹೊತ್ತಿದೆ. ದಾಳಿಕೋರರು ಮತ್ತು ಉಗ್ರ ಸಂಘಟನೆಗಳ ನಡುವಿನ ಸಂಬಂಧದ ಬಗ್ಗೆ ತನಿಖಾಧಿಕಾರಿಗಳಿಗೆ ಇನ್ನೂ ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.

ಕಳೆದ 21ರ ಈಸ್ಟರ್‌ ಹಬ್ಬದಂದು ಶ್ರೀಲಂಕಾದ ಕೊಲೊಂಬೋದಲ್ಲಿ ಚರ್ಚ್‌ ಮತ್ತು ಹೊಟೇಲ್‌ಗಳಲ್ಲಿ ಆತ್ಮಾಹುತಿ ಬಾಂಬ್‌ ನಡೆದಿದ್ದು, ಈ ವರೆಗೆ 250 ಮಂದಿ ಮೃತಪಟ್ಟಿದ್ದಾರೆ. 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಕರ್ನಾಟಕದ ಹಲವರು ಸಾವಿಗೀಡಾಗಿದ್ದರು.

ಅಮಾನತು: ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪೊಲೀಸ್‌ ಮುಖ್ಯಸ್ಥ ಪುಜಿತ್‌ ಜಯಸುಂದರ ಅವರನ್ನು ಅಮಾನತುಗೊಳಿಸಿ, ಈ ಹುದ್ದೆಗೆ ಮತ್ತು ರಕ್ಷಣಾ ಕಾರ್ಯದರ್ಶಿಯನ್ನು ಹೊಸದಾಗಿ ನೇಮಿಸಿ ಸಿರಿಸೇನಾ ಸೋಮವಾರ ಆದೇಶ ಹೊರಡಿಸಿದ್ದಾರೆ.

ದಾಳಿಯ ನಂತರ ಗುಪ್ತಚರ ವಿಭಾಗದ ವೈಫಲ್ಯದ ಹಿನ್ನೆಲೆಯಲ್ಲಿ ಜಯಸುಂದರ ಮತ್ತು ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೊ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು. ಫರ್ನಾಂಡೊ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಜಯಸುಂದರ ಅವರು ರಾಜೀನಾಮೆ ಪತ್ರ ಕಳುಹಿಸದೇ, ಸರ್ಕಾರಿ ನಿವಾಸದಲ್ಲಿಯೇ ಇದ್ದರು ಎಂದು ಸಿರಿಸೇನಾ ಹೇಳಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.