ADVERTISEMENT

ವಿದ್ಯುತ್ ವ್ಯತ್ಯಯ: ವಹಿವಾಟಿನ ಸಮಯ ಕಡಿತಗೊಳಿಸಿದ ಶ್ರೀಲಂಕಾ ಷೇರುಪೇಟೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 7:12 IST
Last Updated 31 ಮಾರ್ಚ್ 2022, 7:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಲೊಂಬೊ: ವಿದ್ಯುತ್ ಕಡಿತದಿಂದಾಗಿ 30 ನಿಮಿಷಗಳ ಕಾಲ ಶ್ರೀಲಂಕಾದ ಷೇರುಪೇಟೆ ವಹಿವಾಟು ಸ್ಥಗಿತಗೊಂಡಿದೆ. ಕಳೆದ 2 ದಿನಗಳಿಂದ ಮೂರನೇ ಬಾರಿ ಈ ರೀತಿಯಾಗಿದೆ ಎಂದು ಕೊಲೊಂಬೊ ಸ್ಟಾಕ್‌ ಎಕ್ಸ್‌ಚೇಂಜ್‌ (ಸಿಎಸ್ಇ) ತಿಳಿಸಿದೆ.

ಬುಧವಾರ ಎರಡು ಸಲ ವಹಿವಾಟು ಸ್ಥಗಿತಗೊಂಡಿತ್ತು.

ವಿದೇಶಿ ವಿನಿಮಯ ಮೀಸಲು ಕೊರತೆಯಿಂದಾಗಿ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ, ಇಂಧನ ಸೇರಿದಂತೆ ಅಗತ್ಯ ಸೇವೆಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಲಂಕಾದಲ್ಲಿ ಕಳೆದೊಂದು ತಿಂಗಳಿನಿಂದ ದಿನಕ್ಕೆ 7 ಗಂಟೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ. ಹಲವು ಪ್ರದೇಶಗಳಲ್ಲಿ 13 ಗಂಟೆ ವರೆಗೂ ವಿದ್ಯುತ್ ಕಡಿತ ಮಾಡಲಾಗುತ್ತಿದೆ.

ADVERTISEMENT

ಈ ವಾರದ ಉಳಿದ ದಿನಗಳಲ್ಲಿ ನಾಲ್ಕೂವರೆ ಗಂಟೆ ಬದಲು ಎರಡು ಗಂಟೆಗಳ ವರೆಗೆ ವಹಿವಾಟು ನಿರ್ಬಂಧಿಸಲಾಗುವುದು ಎಂದುಸಿಎಸ್ಇ ತಿಳಿಸಿದೆ. ವಿದ್ಯುತ್ ಅಭಾವದ ಹೊರತಾಗಿಯೂ, ಷೇರು ಮಧ್ಯವರ್ತಿಗಳ ಕೋರಿಕೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೂ ಹೇಳಿದೆ.

ವಹಿವಾಟು ಆರಂಭದ ಬಳಿಕ ಷೇರುಪೇಟೆ ಸೂಚ್ಯಂಕ ಕುಸಿದಿದೆ. ವಹಿವಾಟು ಅವಧಿ ಮೇಲಿನ ನಿರ್ಬಂಧದ ಸುದ್ದಿ ಮತ್ತು ವಿದ್ಯುತ್ ಕಡಿತದ ವಿಚಾರವು ಷೇರುಪೇಟೆಯ ಮೇಲೆ ಋಣಾತ್ಮಕ ಪರಿಣಾಮ ಉಂಟುಮಾಡಿದೆ ಎಂದು 'ಲಂಕಾ ಸೆಕ್ಯುರಿಟೀಸ್‌' ಉದ್ಯಮದ ಷೇರು ಮಧ್ಯವರ್ತಿ ಹಾಗೂ ವಿಶ್ಲೇಷಕಿ ರೋಷಿನಿ ಗಮಗೆ ಹೇಳಿದ್ದಾರೆ.

2.2 ಕೋಟಿ ಜನಸಂಖ್ಯೆ ಹೊಂದಿರುವ ಶ್ರೀಲಂಕಾ ಏಳು ದಶಕಗಳಲ್ಲಿಯೇ ಕಂಡರಿಯದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.1948ರಲ್ಲಿ ಬ್ರಿಟನ್‌ನಿಂದ ಶ್ರೀಲಂಕಾ ಸ್ವಾತಂತ್ರ್ಯ ಪಡೆದಿತ್ತು.ಕೋವಿಡ್‌ ಸಾಂಕ್ರಾಮಿಕವು ಶ್ರೀಲಂಕಾದ ಈ ಆರ್ಥಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ.

ಪ್ರವಾಸೋದ್ಯಮವೇ ಇಲ್ಲಿನ ಪ್ರಮುಖ ಆದಾಯದ ಮೂಲ. ಆದರೆಕೋವಿಡ್‌ನಿಂದಾಗಿ ಈ ಕ್ಷೇತ್ರ ಸಂಪೂರ್ಣ ನೆಲಕಚ್ಚಿದೆ.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.