ADVERTISEMENT

ಪಾಕಿಸ್ತಾನ | ಸುನ್ನಿ–ಶಿಯಾಗಳ ಸಂಘರ್ಷ: ಸಾವಿನ ಸಂಖ್ಯೆ 133ಕ್ಕೇರಿಕೆ

ರಾಯಿಟರ್ಸ್
Published 2 ಡಿಸೆಂಬರ್ 2024, 9:52 IST
Last Updated 2 ಡಿಸೆಂಬರ್ 2024, 9:52 IST
<div class="paragraphs"><p>ಸಾವು&nbsp;(ಪ್ರಾತಿನಿಧಿಕ ಚಿತ್ರ)</p></div>

ಸಾವು (ಪ್ರಾತಿನಿಧಿಕ ಚಿತ್ರ)

   

ಪೆಶಾವರ್: ಕದನ ವಿರಾಮದ ಹೊರತಾಗಿಯೂ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಕುರ್ರಮ್ ಜಿಲ್ಲೆಯಲ್ಲಿ ಸುನ್ನಿ ಹಾಗೂ ಶಿಯಾ ಮುಸ್ಲಿಂ ಪಂಗಡಗಳ ನಡುವೆ ಸಂಘರ್ಷ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಘರ್ಷ ನಿಯಂತ್ರಣಕ್ಕೆ ಅಧಿಕಾರಿಗಳ ಪ್ರಯತ್ನ ಮುಂದುವರಿದಿದ್ದು, ಸಾವಿನ ಸಂಖ್ಯೆ 130 ದಾಟಿದೆ.

ಅಫ್ಗಾನಿಸ್ತಾನ ಗಡಿಯಲ್ಲಿರುವ ಕುರ್ರಮ್ ಜಿಲ್ಲೆಯಲ್ಲಿ ಕಳೆದ ಹಲವು ದಶಕಗಳಿಂದ ಈ ಸಂಘರ್ಷ ನಡೆಯುತ್ತಲೇ ಬಂದಿದೆ. ಒಂದು ತಿಂಗಳ ಹಿಂದೆ ಸಂಘರ್ಷ ತಾರಕಕ್ಕೇರಿದ್ದು, ಡಜನ್‌ಗೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.

ADVERTISEMENT

ಕಳೆದ ಹತ್ತು ದಿನಗಳಲ್ಲಿ ಸಂಘರ್ಷದಿಂದಾಗಿ 133 ಮಂದಿ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾ ಆಡಳಿತಾಧಿಕಾರಿ ವಾಜಿದ್ ಹುಸೇನ್ ಮಾಹಿತಿ ನೀಡಿದ್ದಾರೆ.

ಉಭಯ ಪಂಗಡಗಳ ನಡುವ ಸಂಘರ್ಷ ನಿಯಂತ್ರಣಕ್ಕೆ ಜಿಲ್ಲಾ ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪ್ರಯತ್ನ ಪಡುತ್ತಿದ್ದು, ಅದು ಸಫಲವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಉಭಯ ಪಂಗಡಗಳ ನಡುವೆ ಕಳೆದ ಭಾನುವಾರ ಪಾಕಿಸ್ತಾನ ಸರ್ಕಾರವು ಕದನ ವಿರಾಮ ಒಪ್ಪಂದ ಏರ್ಪಡಿಸಿತ್ತು. ಆದರೆ ಅದು ಫಲ ಕೊಟ್ಟಿಲ್ಲ.

ಶಿಯಾಗಳ ಮೇಲೆ ಬಂಧೂಕುಧಾರಿಯೊಬ್ಬ ಗುಂಡು ಹಾರಿಸಿ ಕೊಂದ 43 ಮಂದಿ ಸೇರಿ, ಒಟ್ಟು 97 ಜನ ಸಾವಿಗೀಡಾಗಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನುಳಿದವರು ಪ್ರತೀಕಾರದ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಮುಖ್ಯಮಂತ್ರಿ ಅಲಿ ಅಮಿನ್ ಖಾನ್ ಗಂದಪುರ ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಉಭಯ ಪಂಗಡದ ಹಿರಿಯರು ಹಾಗೂ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು.

‘ಯಾರಾದರೂ ಶಸ್ತ್ರಾಸ್ತ್ರ ಎತ್ತಿಕೊಂಡರೆ ಅವರನ್ನು ಭಯೋತ್ಪಾದಕರು ಎಂದು ಪರಿಗಣಿಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾಗಿ ಅವರ ಕಚೇರಿಯ ಪ್ರಕಟಣೆ ತಿಳಿಸಿತ್ತು. ಸ್ಥಳದಲ್ಲಿ ಭದ್ರತಾ ಪಡೆಗಳು ಪಹರೆ ಕಾಯಲಿವೆ ಎಂದೂ ತಿಳಿಸಿತ್ತು.

ಕುರ್ರಮ್‌ನ ಪ್ರಮುಖ ನಗರ ಪರಾಚಿಬಾರ್‌ ಹಾಗೂ ಪೇಶಾವರ್‌ ಅನ್ನು ಸಂಪರ್ಕಿಸುವ ಮುಖ್ಯ ರಸ್ತೆ ಬಂದ್ ಮಾಡಲಾ‌ಗಿದ್ದು, ಗಾಯಾಳುಗಳನ್ನು ಹಾಗೂ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.