ADVERTISEMENT

ಜನ್ಮದತ್ತ ಪೌರತ್ವ ರದ್ದು: ಟ್ರಂಪ್ ಆದೇಶದ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಏಜೆನ್ಸೀಸ್
Published 6 ಡಿಸೆಂಬರ್ 2025, 4:53 IST
Last Updated 6 ಡಿಸೆಂಬರ್ 2025, 4:53 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವಾಷಿಂಗ್ಟನ್: ಅಮೆರಿಕದಲ್ಲಿ ಅಕ್ರಮವಾಗಿ ಅಥವಾ ತಾತ್ಕಾಲಿಕವಾಗಿ ನೆಲೆಸಿರುವ ಪೋಷಕರಿಗೆ ಜನಿಸಿದ ಮಕ್ಕಳು ಅಮೆರಿಕದ ನಾಗರಿಕರಲ್ಲ ಎಂದು ಘೋಷಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನ್ಮಸಿದ್ಧ ಪೌರತ್ವದ ಆದೇಶದ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.

ಪೌರತ್ವ ನಿರ್ಬಂಧಗಳನ್ನು ರದ್ದುಗೊಳಿಸಿದ ಕೆಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಟ್ರಂಪ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳು ಆಲಿಸಲಿದ್ದಾರೆ. ಆದರೆ, ಟ್ರಂಪ್ ಜಾರಿಗೆ ತೆರಲು ಉದ್ದೇಶಿಸಿರುವ ಜನ್ಮಸಿದ್ಧ ಪೌರತ್ವ ಹಕ್ಕು ರದ್ದತಿ ಆದೇಶ ದೇಶದಲ್ಲಿ ಎಲ್ಲಿಯೂ ಜಾರಿಗೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಇನ್ನಷ್ಟೇ ವಾದ ಪ್ರತಿವಾದಗಳು ನಡೆಯಬೇಕಿದ್ದು, 2026ರ ಮಾರ್ಚ್‌–ಏಪ್ರಿಲ್‌ ವೇಳೆ ನಿರ್ಣಾಯಕ ತೀರ್ಪು ಬರುವ ನಿರೀಕ್ಷೆಯಿದೆ.

ADVERTISEMENT

ಟ್ರಂಪ್ ತಮ್ಮ ಎರಡನೇ ಅವಧಿಯ ಮೊದಲ ದಿನವಾದ 2025ರ ಜನವರಿ 20ರಂದು ‘ಜನ್ಮದತ್ತ ಪೌರತ್ವ ಹಕ್ಕು ರದ್ದತಿ ಆದೇಶ’ಕ್ಕೆ ಸಹಿ ಹಾಕಿದ್ದರು. ಈ ಆದೇಶ ವ್ಯಾಪಕ ವಲಸೆ ನಿಗ್ರಹದ ಭಾಗವಾಗಿದೆ ಎಂದೂ ರಿಪಬ್ಲಿಕನ್ ಆಡಳಿತ ಹೇಳಿಕೊಂಡಿತ್ತು.

ಅಮೆರಿಕದಲ್ಲಿ ನೆಲೆಸಿರುವ ಅಕ್ರಮ ವಲಸಿಗರ ಮಕ್ಕಳಿಗೆ ಜನ್ಮದತ್ತವಾಗಿ ಪೌರತ್ವ ಸಿಗುವುದನ್ನು ನಿರ್ಬಂಧಿಸುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಾರ್ಯಕಾರಿ ಆದೇಶಕ್ಕೆ

ಜನ್ಮದಿಂದಾಗಿ ಸಿಗುವ ಅಮೆರಿಕ ಪೌರತ್ವ ಹಕ್ಕನ್ನು ರದ್ದುಗೊಳಿಸಿ ಟ್ರಂಪ್‌ ಅವರ ಕಾರ್ಯಕಾರಿ ಆದೇಶಕ್ಕೆ 2025ರ ಜನವರಿ 24ರಂದು ಸಿಯಾಟಲ್‌ನ ಫೆಡರಲ್‌ ನ್ಯಾಯಾಲಯವು ರಾಷ್ಟ್ರದಾದ್ಯಂತ ಅನಿರ್ದಿಷ್ಟಾವಧಿವರೆಗೆ ತಡೆ ನೀಡಿತ್ತು.

ಟ್ರಂಪ್‌ ಹೊರಡಿಸಿದ್ದ ಆದೇಶ ಪ್ರಶ್ನಿಸಿ ವಾಷಿಂಗ್ಟನ್, ಅರಿಜೋನಾ, ಇಲಿನಾಯ್ಸ್ ಹಾಗೂ ಒರೆಗಾನ್ ರಾಜ್ಯಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು. ಅಮೆರಿಕದಲ್ಲಿ ಜನಿಸಿದವರಿಗೆ ಸಿಗುವ ಪೌರತ್ವ ಹಕ್ಕು ಕುರಿತ ಕಾಯ್ದೆಗೆ ಸಂವಿಧಾನದ 14ನೇ ತಿದ್ದುಪಡಿ ಹಾಗೂ ಸುಪ್ರೀಂ ಕೋರ್ಟ್‌ ತೀರ್ಪಿನ ಖಾತ್ರಿ ಇದೆ ಎಂದು ಈ ರಾಜ್ಯಗಳು ವಾದಿಸಿದ್ದವು.

ಜನ್ಮದಿಂದಾಗಿ ಸಿಗುವ ಪೌರತ್ವದ ಹಕ್ಕು ರದ್ದುಪಡಿಸಿ ಟ್ರಂಪ್‌ ಹೊರಡಿಸಿರುವ ಆದೇಶ ಪ್ರಶ್ನಿಸಿ ಒಟ್ಟು 22 ರಾಜ್ಯಗಳು ಕೋರ್ಟ್‌ ಮೆಟ್ಟಿಲೇರಿದ್ದವು. ಅಲ್ಲದೇ, ಹಲವಾರು ವಲಸಿಗರ ಹಕ್ಕುಗಳ ಗುಂಪುಗಳು ಕೂಡ ಈ ಸಂಬಂಧ ಅರ್ಜಿ ಸಲ್ಲಿಸಿದ್ದವು.

ಸಂವಿಧಾನವೇ ಜನ್ಮದತ್ತ ಪೌರತ್ವಕ್ಕೆ ಅನುವು ಮಾಡಿಕೊಡುತ್ತದೆ. ಇದನ್ನು ರದ್ದುಪಡಿಸುವ ಆದೇಶ ನೀಡುವ ಹಕ್ಕು ಟ್ರಂಪ್‌ ಅವರಿಗೆ ಇಲ್ಲ ಎಂದು ನ್ಯಾಯಾಧೀಶ ಜಾನ್‌ ಕೂನೌರ್‌ ವಾದಿಸಿದ್ದರು.

ನಾಗರಿಕರಲ್ಲದವರ ಮಕ್ಕಳು ಅಮೆರಿಕದ ನ್ಯಾಯವ್ಯಾಪ್ತಿಗೆ ಒಳಪಡುವುದಿಲ್ಲ ಆದ್ದರಿಂದ ಪೌರತ್ವಕ್ಕೆ ಅರ್ಹರಲ್ಲ ಎಂದು ಟ್ರಂಪ್ ಆಡಳಿತವು ಪ್ರತಿಪಾದಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.