ADVERTISEMENT

ಆಸ್ಟ್ರೇಲಿಯಾ: ‘ಹನುಕ್ಕಾ ಹಬ್ಬ’ ಆಚರಣೆ ವೇಳೆ ಗುಂಡಿನ ದಾಳಿ; 16 ಜನ ಸಾವು

ಏಜೆನ್ಸೀಸ್
Published 15 ಡಿಸೆಂಬರ್ 2025, 2:37 IST
Last Updated 15 ಡಿಸೆಂಬರ್ 2025, 2:37 IST
   

ಸಿಡ್ನಿ: ಇಲ್ಲಿನ ಪ್ರವಾಸಿ ತಾಣ ಬೋಂಡಿ ಬೀಚ್‌ನಲ್ಲಿ ‘ಹನುಕ್ಕಾ ಯಹೂದಿ ಹಬ್ಬ’ದ ಪ್ರಾರಂಭೋತ್ಸವಕ್ಕಾಗಿ ಸೇರಿದ್ದ ಅಪಾರ ಸಂಖ್ಯೆಯ ಜನರ ಮೇಲೆ ಬಂದೂಕುಧಾರಿಗಳಿಬ್ಬರು ನಡೆಸಿದ ಯದ್ವಾತದ್ವಾ ಗುಂಡಿನ ದಾಳಿಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ.

ಪೊಲೀಸರು ನಡೆಸಿದ ಪ್ರತಿ ದಾಳಿಯಲ್ಲಿ ಒಬ್ಬ ದಾಳಿಕೋರ ಮೃತಪಟ್ಟಿದ್ದಾನೆ. ಇನ್ನೊಬ್ಬನನ್ನು ಬಂಧಿಸಲಾಗಿದೆ. ಘಟನೆಯಲ್ಲಿ 29 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುಂಡಿನ ದಾಳಿಯನ್ನು ಆಸ್ಟ್ರೇಲಿಯಾ ಪೊಲೀಸರು ‘ಭಯೋತ್ಪಾದಕ ಕೃತ್ಯ’ ಎಂದು ಘೋಷಿಸಿದ್ದು ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ ದಾಳಿಕೋರನಿಗೆ ಸೇರಿದ ವಾಹನದಿಂದ ಕಚ್ಚಾ ಬಾಂಬ್‌ ಅನ್ನು ವಶಕ್ಕೆ ಪಡೆಯಲಾಗಿದೆ. ಗಾಯಗೊಂಡವರಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳೂ ಸೇರಿದ್ದಾರೆ ಎಂದು ನ್ಯೂ ಸೌತ್‌ ವೇಲ್ಸ್‌ ಸ್ಟೇಟ್‌ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸಾಮೂಹಿಕ ಗುಂಡಿನ ದಾಳಿಗೆ ಕಾರಣ ಏನು ಎನ್ನುವುದನ್ನು ಇನ್ನೂ ಆಸ್ಟ್ರೇಲಿಯಾದ ಸರ್ಕಾರ ಖಚಿತಪಡಿಸಿಲ್ಲ. ಯೆಹೂದಿಗಳ ಎಂಟು ದಿನಗಳ ಚಳಿಗಾಲದ ‘ದೀಪಗಳ ಹಬ್ಬ’ದ ಮೊದಲ ದಿನವಾದ ಭಾನುವಾರ ಸಾವಿರಕ್ಕೂ ಹೆಚ್ಚು ಜನರು ಬೋಂಡಿ ಕಡಲ ತೀರದಲ್ಲಿ ಸೇರಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ವಿಡಿಯೊ ಚಿತ್ರೀಕರಣ ಮಾಡಿದ್ದು, ಅದನ್ನು ಆಸ್ಟ್ರೇಲಿಯಾದ ಕೆಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ. ಈ ವಿಡಿಯೊ ತುಣುಕಿನಲ್ಲಿ ದಾಳಿಕೋರರಲ್ಲಿ ಒಬ್ಬನನ್ನು ತಡೆಯಲು ಜನರು ಮುಂದಾಗುತ್ತಿರುವ ದೃಶ್ಯವಿದೆ.

‘ಬೋಂಡಿ ಬೀಚ್‌ನಲ್ಲಿ ನಡೆದ ಗುಂಡಿನ ದಾಳಿಯು ತೀವ್ರ ದುಃಖಕರ ಘಟನೆ. ದಾಳಿಕೋರರಲ್ಲಿ ಒಬ್ಬನನ್ನು ತಡೆದ ಜನರಿಗೆ ಅಭಿನಂದನೆಗಳು. ಅವರೇ ನಿಜವಾದ ಹೀರೊಗಳು’ ಎಂದು ನ್ಯೂ ಸೌತ್‌ ವೇಲ್ಸ್‌ನ ಮುಖಂಡ ಕ್ರಿಸ್‌ ಮಿನ್ಸ್‌ ಹೇಳಿದ್ದಾರೆ.

‘ಸಂತೋಷದ ದಿನದಂದೇ ದುಷ್ಕೃತ್ಯ’
‘ಹನುಕ್ಕಾ’ ಯಹೂದಿಗಳಿಗೆ ಪವಿತ್ರ ಹಬ್ಬ. ಇದು ನಂಬಿಕೆಯ ಆಚರಣೆ. ಆದರೆ, ಈ ಸಂತೋಷದ ದಿನದಂದೇ ದುಷ್ಕೃತ್ಯ ನಡೆದಿದೆ. ಇದು ಯಹೂದಿ ಆಸ್ಟ್ರೇಲಿಯನ್ನರನ್ನು ಗುರಿಯಾಗಿಸಿ ಕೊಂಡು ನಡೆದ ದಾಳಿಯಾಗಿದೆ. ಭಯೋತ್ಪಾದನೆ ಆಸ್ಟ್ರೇಲಿಯಾದ ಹೃದಯವನ್ನು ಗಾಸಿಗೊಳಿಸಿದೆ’ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಅಲ್ಬನೀಸ್ ಹೇಳಿದ್ದಾರೆ.

ಪ್ರಮುಖ ದಾಳಿಗಳು

  • ಆಸ್ಟ್ರೇಲಿಯಾದಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ನಡೆದಿರುವುದು ಕಡಿಮೆ. 1996ರಲ್ಲಿ ಆರ್ಥರ್ ಬಂದರಿನ ಟ್ಯಾಸ್ಮೆನಿಯನ್‌ ಪಟ್ಟಣದಲ್ಲಿ  ಬಂದೂಕುಧಾರಿಯೊಬ್ಬ ನಡೆಸಿದ ದಾಳಿಯಲ್ಲಿ 35 ಮಂದಿ ಮೃತಪಟ್ಟಿದ್ದರು

  • 2014ರಲ್ಲಿ ಐವರು ಮೃತಪಟ್ಟಿದ್ದರು

  • 2018ರಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸ್ವಂತ ಕುಟುಂಬದ 8 ಜನರಿಗೆ ಗುಂಡಿಕ್ಕಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ

  • 2022ರಲ್ಲಿ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದರು

ಬ್ರಿಟನ್‌ನಲ್ಲಿ ಯಹೂದಿಗಳ ಪ್ರದೇಶ ಮತ್ತು ಯಹೂದ್ಯರ ಪೂಜಾ ಮಂದಿರ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗುವುದು.
– ಕಿಯರ್‌ ಸ್ಟಾರ್ಮರ್‌, ಬ್ರಿಟನ್‌ ಪ್ರಧಾನಿ
ಪ್ಯಾಲೆಸ್ಟೀನ್‌ ಪ್ರತ್ಯೇಕ ರಾಷ್ಟ್ರ ರಚನೆಗೆ ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಅಲ್ಬನೀಸ್ ಕರೆ ಕೊಟ್ಟಿದ್ದರು. ನಿಮ್ಮ ಈ ನಿಲುವು ಯೆಹೂದಿ ವಿರೋಧಿ ಬೆಂಕಿಗೆ ತುಪ್ಪ ಸುರಿಯಲಿದೆ ಎಂಬುದಾಗಿ ಅವರಿಗೆ ಆಗ ಎಚ್ಚರಿಸಿದ್ದೆ.
– ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.