ADVERTISEMENT

‘ಮತ ಪ್ರಚಾರಕ’ನ ಪ್ರಾಣ ಪಡೆದ ‘ಬುಡಕಟ್ಟು’ ಬಾಣ!

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ

ಏಜೆನ್ಸೀಸ್
Published 22 ನವೆಂಬರ್ 2018, 20:15 IST
Last Updated 22 ನವೆಂಬರ್ 2018, 20:15 IST
ಜಾನ್‌ ಆ್ಯಲನ್‌ ಚೌ
ಜಾನ್‌ ಆ್ಯಲನ್‌ ಚೌ   

ಪೋರ್ಟ್‌ ಬ್ಲೇರ್‌: ನಾಗರಿಕ ಸಮಾಜದಿಂದ ದೂರವೇ ಉಳಿದಿರುವ ಸಂರಕ್ಷಿತ ಬುಡಕಟ್ಟು ಜನರನ್ನು ಭೇಟಿಯಾಗಲು ಯತ್ನಿಸಿದ ಆ ಸಾಹಸಿ, ಅದೇ ಬುಡಕಟ್ಟು ಜನರಿಂದ ತೂರಿ ಬಂದ ಕೂರಂಬುಗಳಿಗೆ ಬಲಿಯಾದ.

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹದಲ್ಲಿರುವ ಉತ್ತರ ಸೆಂಟಿನೆಲ್‌ ದ್ವೀಪಕ್ಕೆ ತೆರಳಿದ್ದ ಅಮೆರಿಕ ಮೂಲದ 27 ವರ್ಷದ ಜಾನ್‌ ಆ್ಯಲೆನ್‌ ಚೌ, ಬಾಣಗಳು ನೆಟ್ಟ ಪರಿಣಾಮ ಪ್ರಾಣ ತೆತ್ತ ದುರ್ದೈವಿ. ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಿಂದ ಚೌ ಹಾಗೂ ಅವರ ಸಾವಿನ ಬಗ್ಗೆ ಅನೇಕ ವಿಷಯಗಳು ಬೆಳಕಿಗೆ ಬಂದಿವೆ.

ಚೌ ಕ್ರೈಸ್ತ ಧರ್ಮ ಪ್ರಚಾರಕ ಎನ್ನಲಾಗುತ್ತಿದೆ. ಅಮೆರಿಕ ಮೂಲದ ಇಂಟರ್‌ನ್ಯಾಷನಲ್‌ ಕ್ರಿಶ್ಚಿಯನ್‌ ಕನ್ಸರ್ಸ್‌ ಎಂಬ ಸಂಘಟನೆ, ಚೌ ತನ್ನ ಸದಸ್ಯ ಎಂದು ಹೇಳಿಕೊಂಡಿದ್ದಾಗಿಯೂ ಮಾಧ್ಯಮಗಳು ವರದಿ ಮಾಡಿವೆ. ‘ಕುಟುಂಬ ಸದಸ್ಯರು ಚೌ ಗೆ ಸೇರಿದ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿ ಈ ಮಾತನ್ನು ಪುಷ್ಟೀಕರಿಸುತ್ತವೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಹಣ ನೀಡಿದ್ದ: ಸೆಂಟಿನೆಲ್‌ ದ್ವೀಪಕ್ಕೆ ತನ್ನನ್ನು ಕರೆದುಕೊಂಡು ಹೋಗಲು ಚೌ ತಮಗೆ ₹25,000 ನೀಡಿದ್ದರು ಎಂದು ವಿಚಾರಣೆ ವೇಳೆ ಮೀನುಗಾರರು ಪೊಲೀಸರಿಗೆ ತಿಳಿಸಿದ್ದರು ಎನ್ನಲಾಗಿದೆ.

‘ಸೆಂಟಿನೆಲ್‌ ಬುಡಕಟ್ಟು ಜನರಿಗೆ ಕೊಡಲೆಂದೇ ಒಂದಿಷ್ಟು ಮೀನು, ಫುಟ್‌ಬಾಲ್‌ನೊಂದಿಗೆ ಆ ದ್ವೀಪಕ್ಕೆ ಹೋಗಿದ್ದ ಚೌಗೆ ಹರಿತವಾದ ಬಾಣಗಳಿಂದ ಸ್ವಾಗತ ಸಿಕ್ಕಿತು. ಒಂದು ಬಾಣ ಬೈಬಲ್‌ ಹೊಕ್ಕು ಆಚೆ ಬಂದಿತ್ತು. ಈ ಘಟನೆ ನಂತರ ಮರಳಿ ಬಂದಿದ್ದ ಚೌ, ತನ್ನ ಅನುಭವವನ್ನು ಬರೆದಿಟ್ಟ’ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ನಾನು ಜಾನ್‌. ನಿಮ್ಮನ್ನು ಪ್ರೀತಿಸುತ್ತೇನೆ. ಜೀಸಸ್‌ ಸಹ ಪ್ರೀತಿಸುತ್ತಾನೆ. ನಿಮಗಾಗಿ ಇಗೋ ಮೀನು ತಂದಿದ್ದೇನೆ ಎಂದು ಹೇಳುವ ಮೂಲಕ ಚೌ, ಬುಡಕಟ್ಟು ಜನರ ಮನ ಗೆಲ್ಲಲು ಯತ್ನಿಸಿದ್ದರು’ ಎಂದೂ ಹೇಳಲಾಗಿದೆ.

‘ಮರು ದಿನ ಮೀನುಗಾರರು ದ್ವೀಪದತ್ತ ಹೋದಾಗ, ಬುಡಕಟ್ಟು ಜನರು ಚೌ ಮೃತದೇಹವನ್ನು ಸಮುದ್ರ ತೀರದಲ್ಲಿ ಹೂಳುತ್ತಿರುವುದನ್ನು ನೋಡಿದರು. ಈ ವಿಷಯವನ್ನು ಮಿಷನರಿ ಸದಸ್ಯರೊಬ್ಬರು ಚೌ ತಾಯಿಗೆ ಕಳಿಸಿರುವ ಇ–ಮೇಲ್‌ನಲ್ಲಿ ವಿವರಿಸಿದ್ದಾರೆ’ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ವರದಿಗೆ ಮನವಿ: ಅಮೆರಿಕ ಪ್ರಜೆ ಚೌ ಹತ್ಯೆ ಕುರಿತಂತೆ ವರದಿ ಸಲ್ಲಿಸುವಂತೆ ಕೋರಿ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ (ಎನ್‌ಸಿಎಸ್‌ಟಿ) ಅಧ್ಯಕ್ಷ ನಂದಕುಮಾರ್‌ ಸಾಯಿ ಕೇಂದ್ರ ಗೃಹ ಸಚಿವಾಲಯ ಹಾಗೂ ಅಂಡಮಾನ್‌ ಮತ್ತು ನಿಕೋಬಾರ್‌ ಆಡಳಿತಕ್ಕೆ ಪತ್ರ ಬರೆದಿದ್ದಾರೆ.

‘ಇನ್ನಷ್ಟೂ ದಿನ ಬೇಕು’
‘ಅಮೆರಿಕ ಪ್ರಜೆ ಜಾನ್‌ ಆ್ಯಲನ್‌ ಚೌ ಮೃತದೇಹ ಪತ್ತೆಗೆ ಇನ್ನೂ ಕಾಲಾವಕಾಶ ಬೇಕು’ ಎಂದು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹದ ಪೊಲೀಸ್‌ ಅಧಿಕಾರಿ ದೀಪೇಂದ್ರ ಪಾಠಕ್‌ ಅಭಿಪ್ರಾಯಪಟ್ಟಿದ್ದಾರೆ.

ದುರದೃಷ್ಟಕರ...
ಬುಡಕಟ್ಟು ಜನರ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿರುವ, ಲಂಡನ್‌ನ ‘ಸರ್ವೈವಲ್‌ ಇಂಟರ್‌ನ್ಯಾಷನಲ್‌’ ಎಂಬ ಸಂಸ್ಥೆ, ‘ಚೌ ಹತ್ಯೆಯನ್ನು ದುರದೃಷ್ಟಕರ. ಇಂತಹ ಘಟನೆ ನಡೆಯಬಾರದಿತ್ತು’ ಎಂದು ಹೇಳಿದೆ.

‘ಧರ್ಮ ಪ್ರಚಾರಕ ಅಲ್ಲ’
‘ಉತ್ತರ ಸೆಂಟಿನೆಲ್‌ ದ್ವೀಪದಲ್ಲಿ ಸಂರಕ್ಷಿತ ಬುಡಕಟ್ಟು ಜನರಿಂದ ಹತ್ಯೆಯಾಗಿರುವ ಅಮೆರಿಕ ಪ್ರಜೆ ಜಾನ್‌ ಆ್ಯಲೆನ್‌ ಚೌಕ್ರೈಸ್ತ ಧರ್ಮ ಪ್ರಚಾರಕ ಅಲ್ಲ’ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಚೌ ಸಾಹಸ ಪ್ರಿಯ. ನಿರ್ಬಂಧಿತ ಪ್ರದೇಶವೊಂದನ್ನು ತಲುಪುವ ಸಲುವಾಗಿ ಅವರು ಕಾನೂನು ಉಲ್ಲಂಘಿಸಿದ್ದಾರೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.