ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ಭಾರತದ ಬೆನ್ನಲ್ಲೇ ಚೀನಾದ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ನೀಡಿದ್ದಾರೆ.
ಶ್ವೇತಭವನದಲ್ಲಿ ಈ ಕುರಿತು ಮಾಧ್ಯಮದವರು ಕೇಳಿದಾಗ, 'ಅದು ಸಂಭವಿಸಬಹುದು. ನನಗೆ ಗೊತ್ತಿಲ್ಲ. ಹಾಗಾಗಿ ಈಗ ಏನನ್ನೂ ಹೇಳಲಾರೆ. ನಾವೀಗಲೇ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದೇವೆ. ಬಹುಶಃ ಬೇರೆ ರಾಷ್ಟ್ರಗಳ ಮೇಲೂ ಹೇರಬಹುದು. ಅದರಲ್ಲಿ ಚೀನಾ ಕೂಡ ಇರಬಹುದು' ಎಂದು ಹೇಳಿದ್ದಾರೆ.
ಭಾರತದ ರೀತಿಯಲ್ಲಿ ಚೀನಾದ ಮೇಲೂ ಸುಂಕ ವಿಧಿಸುವ ಯೋಜನೆ ಹೊಂದಿದ್ದೀರಾ ಎಂಬ ಪ್ರಶ್ನೆಗೆ 'ಅದು ಸಂಭವಿಸಬಹುದು. ಅದನ್ನು ನಾವು ಹೇಗೆ ಮಾಡುತ್ತೇವೆ ಎಂಬುದರಲ್ಲಿ ಅವಲಂಬಿಸಿರುತ್ತದೆ. ಸಂಭವಿಸಬಹುದು' ಎಂದು ಉತ್ತರಿಸಿದ್ದಾರೆ.
ಚೀನಾದಂತಹ ರಾಷ್ಟ್ರಗಳು ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಆದರೆ ಭಾರತವನ್ನು ಮಾತ್ರ ಪ್ರತ್ಯೇಕಿಸಿ ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ ಎಂದು ಕೇಳಿದಾಗ, 'ಈಗ ಎಂಟು ತಾಸು ಅಷ್ಟೇ ಆಗಿದೆ. ನೋಡೋಣ ಏನಾಗುತ್ತದೆ. ನೀವು ಇನ್ನೂ ಹೆಚ್ಚಿನದ್ದನ್ನು ನೋಡಲಿದ್ದೀರಿ' ಎಂದು ಹೇಳಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಅಮೆರಿಕದ ಬೆದರಿಕೆಗೆ ಭಾರತ ಮಣಿಯದ ಬೆನ್ನಲ್ಲೇ, ಅಮೆರಿಕ ಭಾರತದಿಂದ ಆಮದು ಮಾಡಿ ಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡ 25ರಷ್ಟು ಸುಂಕ ಹೇರುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸಹಿ ಹಾಕಿದ್ದರು. ಇದರೊಂದಿಗೆ ಭಾರತದ ಮೇಲೆ ಹೇರಲಾದ ಸುಂಕದ ಪ್ರಮಾಣ ಶೇ 50ಕ್ಕೆ ಏರಿದಂತಾಗಿದೆ. ಟ್ರಂಪ್ ಅವರ ಈ ನಡೆಯು, ಜವಳಿ, ಸಾಗರ ಹಾಗೂ ಚರ್ಮ ಉತ್ಪನ್ನ ಗಳ ರಫ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.