ADVERTISEMENT

ಉತ್ತರ ಗಾಜಾದ ಗಡಿ ತೆರೆದ ಇಸ್ರೇಲ್‌: ಮರಳಿ ಗೂಡು ಸೇರುತ್ತಿರುವ ಪ್ಯಾಲೆಸ್ಟೀನಿಯರು

ಏಜೆನ್ಸೀಸ್
Published 27 ಜನವರಿ 2025, 12:48 IST
Last Updated 27 ಜನವರಿ 2025, 12:48 IST
<div class="paragraphs"><p>ನೆಟ್‌ಜರಿಮ್‌ ಕಾರಿಡಾರ್‌ ಮೂಲಕ ಉತ್ತರ ಗಾಜಾವನ್ನು&nbsp;ತಲುಪುತ್ತಿರುವ&nbsp;&nbsp;ಪ್ಯಾಲೆಸ್ಟೀನಿಯನ್ನರು.</p></div>

ನೆಟ್‌ಜರಿಮ್‌ ಕಾರಿಡಾರ್‌ ಮೂಲಕ ಉತ್ತರ ಗಾಜಾವನ್ನು ತಲುಪುತ್ತಿರುವ  ಪ್ಯಾಲೆಸ್ಟೀನಿಯನ್ನರು.

   

(ರಾಯಿಟರ್ಸ್‌ ಚಿತ್ರ)

ಡೇರ್‌ ಅಲ್‌ ಬಾಲಾ: ಊರು ಸೇರುವ ತವಕ, ಮುಖದಲ್ಲಿ ಅತೀವ ಸಂತಸ, ತಮ್ಮ ಬಳಿ ಅಳಿದು ಉಳಿದ ವಸ್ತುಗಳನ್ನು ಸುತ್ತಿಕೊಂಡು, ಕುಟುಂಬದವರೊಂದಿಗೆ ಕಾಲ್ನಡಿಗೆಯಲ್ಲಿ ಸಾವಿರಾರು ಪ್ಯಾಲೆಸ್ಟೀನಿಯನ್ನರು ನೆಟ್‌ಜರಿಮ್‌ ಕಾರಿಡಾರ್‌ ಮೂಲಕ ಉತ್ತರ ಗಾಜಾವನ್ನು ತಲುಪುತ್ತಿದ್ದಾರೆ.

ADVERTISEMENT

ದಕ್ಷಿಣ ಗಾಜಾದ ಭಾಗಗಳಲ್ಲಿ ವಿವಿಧ ನಿರಾಶ್ರಿತರ ಶಿಬಿರಗಳಲ್ಲಿ ಉಳಿದುಕೊಂಡಿದ್ದ ಜನರು ಭಾನುವಾರದ ಹೊತ್ತಿಗೆ ನೆಟ್‌ಜರಿಮ್‌ ಕಾರಿಡಾರ್‌ ಬಳಿ ಜಮಾಯಿಸಲು ಶುರುವಿಟ್ಟಿದ್ದರು. ಆದರೆ, ಗಾಜಾ ಗಡಿಯನ್ನು ಇಸ್ರೇಲ್‌ ತೆರದಿರಲಿಲ್ಲ. ರಾತ್ರಿ ಇಡೀ ಕೊರೆಯುವ ಚಳಿಯಲ್ಲಿಯೇ ಗಾಜಾ ಜನರು ಕಾದು ಕುಳಿತಿದ್ದರು.

ಹಮಾಸ್‌ ಬಂಡುಕೋರ ಸಂಘಟನೆಯು ಒಪ್ಪಂದದಂತೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಇಸ್ರೇಲ್‌ ಆರೋಪಿಸಿತ್ತು. ಒಂದೇ ರಾತ್ರಿಯಲ್ಲಿ ಈ ಸಮಸ್ಯೆಯನ್ನು ಮಧ್ಯವರ್ತಿಗಳು ನಿವಾರಿಸಿದ್ದಾರೆ. ಈ ಕಾರಣದಿಂದ ಸೋಮವಾರ ಬೆಳಿಗ್ಗೆ 7ರ ಸುಮಾರಿಗೆ ಯಾವುದೇ ಪರಿಶೀಲನೆ ಇಲ್ಲದೆ ಗಾಜಾ ಜನರು ತಮ್ಮ ಊರು ಸೇರುತ್ತಿದ್ದಾರೆ.

15 ತಿಂಗಳ ಸುದೀರ್ಘ ಯುದ್ಧವು ಉತ್ತರ ಗಾಜಾವನ್ನು ಸಂಪೂರ್ಣವಾಗಿ ನಾಶ ಮಾಡಿದೆ. ತಮ್ಮ ಮನೆ ಅಥವಾ ಮನೆಯ ಕುರುಹು ಕೂಡ ಇಲ್ಲ ಎನ್ನುವ ಸತ್ಯ ತಿಳಿದಿದ್ದರೂ ಜನರು ಅತೀವ ಉತ್ಸಾಹದಲ್ಲಿ ಮರಳುತ್ತಿದ್ದಾರೆ. ಉತ್ತರ ಗಾಜಾದ ಬಹುಪಾಲು ಜನರು ಊರು ತೊರೆದಿದ್ದರು ಕೆಲವರು ಅಲ್ಲಿಯೇ ಇದ್ದರು. ತಮ್ಮ ಕುಟುಂಬಸ್ಥರನ್ನು ಮತ್ತೊಮ್ಮೆ ನೋಡಿದ ಖುಷಿಯಲ್ಲಿ, ತಮ್ಮವರನ್ನು ಅಪ್ಪಿಕೊಂಡು ಬರಮಾಡಿಕೊಳ್ಳುತ್ತಿದ್ದಾರೆ.

ನೀವು ಮರಳಿ ಮನೆಗೆ ಹೋಗುತ್ತಿದ್ದೀರಿ ಎನ್ನುವ ಅದ್ಬುತ ಭಾವನೆ. ನಿಮ್ಮ ಕುಟುಂಬದ ಹತ್ತಿರ ನಿಮ್ಮ ಪ್ರೀತಿಪಾತ್ರರ ಹತ್ತಿರ ಹೋಗುವುದೇ ಸಂಭ್ರಮ
ಇಬ್ರಾಹಿಂ ಅಬು ಹಸ್ಸೇರಾ ಉತ್ತರ ಗಾಜಾ ನಿವಾಸಿ
ಪ್ಯಾಲೆಸ್ಟೀನಿಯನ್ನರನ್ನು ಓಡಿಸಿ ಉತ್ತರ ಗಾಜಾವನ್ನು ತಮ್ಮ ವಸಾಹತುವನ್ನಾಗಿ ಮಾಡಿಕೊಳ್ಳಬೇಕು ಎಂಬ ಯೋಜನೆಗೆ ಸೋಲಾಗಿದೆ. ಇದು ಗಾಜಾ ಜನರ ಗೆಲುವು
ಹಮಾಸ್‌ ಬಂಡುಕೋರ ಸಂಘಟನೆ
ಏನಿದು ನೆಟ್‌ಜರಿಮ್‌ ಕಾರಿಡಾರ್‌?
ಹಮಾಸ್‌ ಬಂಡುಕೋರರು ಮತ್ತು ಇಸ್ರೇಲ್‌ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ದಕ್ಷಿಣ ಗಾಜಾ ಹಾಗೂ ಉತ್ತರ ಗಾಜಾವನ್ನು ಬೇರ್ಪಡಿಸುವಂತೆ ಈ ಕಾರಿಡಾರ್‌ ಅನ್ನು ನಿರ್ಮಿಸಿತ್ತು. ಇದು 2 ಕಿ.ಮೀ ಅಗಲ ಮತ್ತು 6.ಕಿ.ಮೀ ಉದ್ದವಿದೆ.  ಉತ್ತರ ಗಾಜಾವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಳ್ಳುವ ಸಲುವಾಗಿಯೇ ಈ ಕಾರಿಡಾರ್‌ ನಿರ್ಮಾಣ ಮಾಡಿದೆ ಎನ್ನಲಾಗಿತ್ತು. ಈಗ ಪ್ಯಾಲೆಸ್ಟೀನಿಯನ್ನರು ಇದೇ ಕಾರಿಡಾರ್‌ ಮೂಲಕ ತಮ್ಮ ಊರಿಗೆ ಮರಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.