ವಿದೇಶಾಂಗ ಸಚಿವ ಎಸ್. ಜೈಶಂಕರ್
ಬ್ರಸೆಲ್ಸ್: ಭಯೋತ್ಪಾದನೆಯನ್ನು ಜಾಗತಿಕ ಸಮಸ್ಯೆಯಾಗಿ ನೋಡಬೇಕೇ ಹೊರತು ರಾಜತಾಂತ್ರಿಕ ಸಮಸ್ಯೆಯಾಗಿ ಅಲ್ಲ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಇದೇ ವೇಳೆ ಜಾಗತಿಕವಾಗಿ ನಡೆದ ಹಲವು ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕಿಸ್ತಾನದ ನಂಟಿದೆ ಎಂದು ಉಲ್ಲೇಖಿಸಿದ್ದಾರೆ.
ಯುರೋಪ್ ಪ್ರವಾಸದಲ್ಲಿರುವ ಜೈಶಂಕರ್ ಅವರು, ಬೆಲ್ಜಿಯಂ ಮತ್ತು ಲಕ್ಸಂಬರ್ಗ್‌ನಲ್ಲಿನ ಭಾರತೀಯರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ಬೆಲ್ಜಿಯಂನ ವಿದೇಶಾಂಗ ಸಚಿವರನ್ನು ಉದ್ದೇಶಿಸಿ, ಭಯೋತ್ಪಾದನೆ ನಿಗ್ರಹಕ್ಕೆ ಬೆಲ್ಜಿಯಂನ ಸಹಕಾರವನ್ನು ಶ್ಲಾಘಿಸಿದರು.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ ಕುರಿತು ಮಾತನಾಡಿದರು. 2016 ರಲ್ಲಿ ಬ್ರಸೆಲ್ಸ್ ಮೇಲೆ ನಡೆದ ಭಯೋತ್ಪಾದಕ ದಾಳಿಯು ನೀವಂದುಕೊಂಡಂತೆ ಒಂದು ದೇಶಕ್ಕೆ ಸೀಮಿತವಾದ ಸಮಸ್ಯೆಯಲ್ಲ ಎಂದರು.
ಭಾರತ ಮತ್ತು ಪಾಕಿಸ್ತಾನದ ಸಮಸ್ಯೆ ಅಥವಾ ಕಾಶ್ಮೀರದ ಸಮಸ್ಯೆ ಬಗ್ಗೆ ಮಾಧ್ಯಮಗಳ ವರದಿಯನ್ನು ನೋಡಬೇಡಿ, ಏಕೆಂದರೆ ಮಾಧ್ಯಮಗಳು ಎಂದಿಗೂ ಪಕ್ಷಪಾತದಿಂದ ಮುಕ್ತವಾಗಿಲ್ಲ. ಭಯೋತ್ಪಾದನೆ ಸಮಸ್ಯೆಯನ್ನು ಪ್ರತಿಯೊಂದು ದೇಶವೂ ತನ್ನದೇ ಆದ ದೃಷ್ಟಿಕೋನದಿಂದ ನೋಡುತ್ತದೆ. ಕೆಲವು ಗುಂಪುಗಳು ಉದ್ದೇಶಪೂರ್ವಕವಾಗಿ ಕೆಲವು ವಿಚಾರಗಳನ್ನು ದೇಶದ ಜನರಿಗೆ ತಲುಪುವಂತೆ ಮಾಡುತ್ತವೆ ಎಂದರು.
ಭಯೋತ್ಪಾದನೆಯ ಸಮಸ್ಯೆಯನ್ನು ಕೇವಲ ಎರಡು ದೇಶಗಳ ನಡುವಿನ ಸಮಸ್ಯೆ ಎಂದು ಪರಿಗಣಿಸಬೇಡಿ. ಕಳೆದ 20–30 ವರ್ಷಗಳ ಭಯೋತ್ಪಾದನೆ ಇತಿಹಾಸವನ್ನು ನೋಡಿದರೆ ಇಂತಹ ಹಲವು ಘಟನೆಗಳು ಅಂತಿಮವಾಗಿ ಪಾಕಿಸ್ತಾನದಲ್ಲಿ ಕೊನೆಗೊಳ್ಳುತ್ತವೆ ಎಂದರು.
ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಮಸ್ಯೆ ಹೆಚ್ಚಾಯಿತು. ಹೀಗಾಗಿ ಭಾರತ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಮೇ 7 ರಂದು ಭಯೋತ್ಪಾದಕತೆಯ ವಿರುದ್ಧದ ಸಮರ ಸಾರಿತು ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.