ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
ಕೃಪೆ: ಪಿಎಂಒ, ಪಿಟಿಐ
ರಿಯೊ ಡಿ ಜನೈರೊ: ಭಯೋತ್ಪಾದನೆಯ ಸಂತ್ರಸ್ತರು ಹಾಗೂ ಪೋಷಕರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ಭಯೋತ್ಪಾದಕರ ವಿರುದ್ಧ ನಿರ್ಬಂಧಗಳನ್ನು ವಿಧಿಸಲು ಹಿಂಜರಿಕೆ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ಕರೆ ನೀಡಿದ್ದಾರೆ.
ಭಾನುವಾರ ಆರಂಭವಾಗಿರುವ ಶೃಂಗಸಭೆಯಲ್ಲಿ ಶಾಂತಿ ಹಾಗೂ ಭದ್ರತೆ ಕುರಿತು ಮಾತನಾಡಿರುವ ಮೋದಿ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಹೇಡಿತನದ ಭಯೋತ್ಪಾದಕ ದಾಳಿಯು ಭಾರತದ ಆತ್ಮ, ಅಸ್ಮಿತೆ ಹಾಗೂ ಘನತೆ ಮೇಲಿನ ನೇರ ದಾಳಿಯಾಗಿದೆ. ಭಯೋತ್ಪಾದನೆಯನ್ನು ನಿಗ್ರಹಿಸಲು ಒಗ್ಗಟ್ಟಿನ ಪ್ರಯತ್ನಗಳು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.
'ಉಗ್ರವಾದವು ಮಾನವೀಯತೆಗೆ ಎದುರಾಗಿರುವ ಅತ್ಯಂತ ಗಂಭೀರ ಸವಾಲು' ಎಂದೂ ಅವರು ಇದೇ ವೇಳೆ ಒತ್ತಿಹೇಳಿದ್ದಾರೆ.
'ಪಹಲ್ಗಾಮ್‌ನಲ್ಲಿ ನಡೆದ ದಾಳಿಯು ಭಾರತಕ್ಕಷ್ಟೇ ಅಲ್ಲ. ಇಡೀ ಮನುಕುಲಕ್ಕೆ ದೊಡ್ಡ ಹೊಡೆತವಾಗಿದೆ' ಎಂದಿರುವ ಮೋದಿ, 'ಭಯೋತ್ಪಾದನೆಯನ್ನು ಖಂಡಿಸುವುದು ತತ್ವವಾಗಬೇಕೇ ಹೊರತು, ಸಮಯಕ್ಕೆ ತಕ್ಕ ಅನುಕೂಲಸಿಂಧು ನಿಲುವಾಗಿರಬಾರದು' ಎಂದು ಕಿವಿಮಾತು ಹೇಳಿದ್ದಾರೆ.
'ಯಾವ ದೇಶದ ಮೇಲೆ, ಯಾರ ವಿರುದ್ಧ ದಾಳಿ ನಡೆದಿದೆ ಎಂಬುದನ್ನು ನೋಡುತ್ತಾ ಕೂರುವುದು ಮಾನವೀಯತೆಗೆ ಮಾಡುವ ದ್ರೋಹವಾಗುತ್ತದೆ. ಭಯೋತ್ಪಾದನೆ ವಿರುದ್ಧ ನಿರ್ಬಂಧಗಳನ್ನು ಹೇರಲು ಹಿಂಜರಿಯಬಾರದು' ಎಂದು ಕರೆ ನೀಡಿದ್ದಾರೆ.
ಬ್ರೆಜಿಲ್‌ನ ಕರಾವಳಿ ನಗರ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಎರಡು ದಿನಗಳ ಶೃಂಗ ಸಭೆಯಲ್ಲಿ ಭಾಗವಹಿಸಿರುವ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರು, ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ.
ಭಯೋತ್ಪಾದನೆಗೆ ಖಂಡನೆ
ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರು, ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆ ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದಾರೆ.
'2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ದಾಳಿಯಲ್ಲಿ 26 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಗಡಿಯಾಚೆಗಿನ ಭಯೋತ್ಪಾದನೆ, ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವು ಸೇರಿದಂತೆ ಉಗ್ರವಾದದ ವಿರುದ್ಧ ಕ್ರಮ ಕೈಗೊಳ್ಳುವ ನಮ್ಮ ಬದ್ಧತೆಯನ್ನು ಪುನರುಚ್ಛರಿಸುತ್ತೇವೆ' ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.