ADVERTISEMENT

ಟಿಕ್‌ಟಾಕ್‌ ಮೇಲಿನ ನಿಷೇಧ ವಾಪಸ್‌; ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 15:38 IST
Last Updated 20 ಜನವರಿ 2025, 15:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೂಸ್ಟನ್‌: ಜನಪ್ರಿಯ ವಿಡಿಯೊ ಆ್ಯಪ್‌ ‘ಟಿಕ್‌ಟಾಕ್‌’ ಮೇಲಿನ ನಿಷೇಧವನ್ನು ಹಿಂಪಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ಟ್ರಂಪ್‌ ಅವರ ಘೋಷಣೆಯ ಬೆನ್ನಲ್ಲೆ, ಟಿಕ್‌ಟಾಕ್‌ ಅಮೆರಿಕದಲ್ಲಿ ಸೇವೆಗಳನ್ನು ಮತ್ತೆ ಆರಂಭಿಸಿದೆ.

ರ್‍ಯಾಲಿಯೊಂದರಲ್ಲಿ ಮಾತನಾಡಿದ ಟ್ರಂಪ್‌, ಅಧಿಕಾರ ವಹಿಸಿಕೊಂಡ ಬಳಿಕ ಈ ಬಗ್ಗೆ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ.

ADVERTISEMENT

‘ನಾವು ಹಲವು ಮಂದಿಯ ಉದ್ಯೋಗಗಳನ್ನು ಉಳಿಸಬೇಕಿದೆ. ನಮ್ಮ ಉದ್ಯಮವು ಚೀನಾದ ಪಾಲಾಗುವುದು ನಮಗಿಷ್ಟವಿಲ್ಲ. ನಮ್ಮ ಉದ್ಯಮವನ್ನು ಬೇರೆ ಯಾರಿಗೋ ಬಿಟ್ಟುಕೊಡಲು ಇಷ್ಟಪಡುವುದಿಲ್ಲ’ ಎಂದಿದ್ದಾರೆ.

‘ಟಿಕ್‌ಟಾಕ್‌ ಸಂಸ್ಥೆಯು ಜಂಟಿ ಉದ್ಯಮವಾಗಿ ಮಾರ್ಪಾಡುಗೊಳ್ಳಬೇಕು. ಶೇ 50ರಷ್ಟು ‍ಪಾಲನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು’ ಎಂಬ ಷರತ್ತು ವಿಧಿಸಿದ್ದಾರೆ.

‘ಟಿಕ್‌ಟಾಕ್‌ ಮರಳಿ ಬಂದಿದೆ. ನಾನೂ ಈ ಹಿಂದೆ ಒಂದೆರಡು ಟಿಕ್‌ಟಾಕ್‌ ವಿಡಿಯೊಗಳನ್ನು ಮಾಡಿರುವುದು ನಿಮಗೆ ಗೊತ್ತಿದೆ. ಟಿಕ್‌ಟಾಕ್‌ನ ನೆರವಿನಿಂದ ನಮ್ಮ ಪಕ್ಷಕ್ಕೆ ಬಹುಪಾಲು ಯುವಕರ ಮತಗಳು ಬಂದಿವೆ. ಟಿಕ್‌ಟಾಕ್‌ ಅಂದ್ರೆ ನನಗಿಷ್ಟ’ ಎಂದು ಅವರು ಹೇಳಿದ್ದಾರೆ.

‘ನಾವು ಅಮೆರಿಕದಲ್ಲಿ ಸೇವೆಯನ್ನು ಪುನರಾರಂಭ ಮಾಡಲು ಟ್ರಂಪ್‌ ಅವರು ಭರವಸೆ ನೀಡಿದ್ದಾರೆ. ಈ ಬಗ್ಗೆ ತ್ವರಿತವಾಗಿ ಸ್ಪಷ್ಟನೆ ನೀಡಿದ್ದಕ್ಕಾಗಿ ಟ್ರಂಪ್‌ ಅವರಿಗೆ ಧನ್ಯವಾದ ತಿಳಿಸುತ್ತೇವೆ’ ಎಂದು ಟಿಕ್‌ಟಾಕ್‌ ಸಂಸ್ಥೆ ತಿಳಿಸಿದೆ.

ರಾಷ್ಟ್ರೀಯ ಭದ್ರತೆಗೆ ಟಿಕ್‌ಟಾಕ್‌ ಆ್ಯಪ್‌ ಧಕ್ಕೆಯುಂಟು ಮಾಡಲಿದೆ ಎಂದು ಭದ್ರತಾ ಸಂಸ್ಥೆಗಳು ವರದಿ ನೀಡಿದ್ದರಿಂದ, ಜೋ ಬೈಡನ್‌ ಸರ್ಕಾರವು ಟಿಕ್‌ಟಾಕ್‌ ಮೇಲೆ ನಿಷೇಧ ಹೇರುವ ತೀರ್ಮಾನ ತೆಗೆದುಕೊಂಡಿತ್ತು. ಹೀಗಾಗಿ, ಟಿಕ್‌ಟಾಕ್‌ ಅಮೆರಿಕದಲ್ಲಿ ಶನಿವಾರದಿಂದ ಸೇವೆ ಸ್ಥಗಿತಗೊಳಿಸಿತ್ತು.

ಅಮೆರಿಕದಲ್ಲಿ 17 ಕೋಟಿ ಜನರು ಟಿಕ್‌ಟಾಕ್‌ ಆ್ಯಪ್‌ ಬಳಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.