ADVERTISEMENT

‘ಬ್ರಿಟನ್‌ ಜತೆ ವ್ಯಾಪಾರ ಒಪ್ಪಂದ’

ಪ್ರಧಾನಿ ತೆರೆಸಾ ಮೇ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಡೊನಾಲ್ಡ್‌ ಟ್ರಂಪ್‌

ಏಜೆನ್ಸೀಸ್
Published 4 ಜೂನ್ 2019, 19:00 IST
Last Updated 4 ಜೂನ್ 2019, 19:00 IST
ಡೊನಾಲ್ಡ್‌ ಟ್ರಂಪ್‌ ಅವರ ನೀತಿಗಳನ್ನು ವಿರೋಧಿಸಿ ಲಂಡನ್‌ನಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ರಾಯಿಟರ್ಸ್‌ ಚಿತ್ರ
ಡೊನಾಲ್ಡ್‌ ಟ್ರಂಪ್‌ ಅವರ ನೀತಿಗಳನ್ನು ವಿರೋಧಿಸಿ ಲಂಡನ್‌ನಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ರಾಯಿಟರ್ಸ್‌ ಚಿತ್ರ   

ಲಂಡನ್‌ (ಎಎಫ್‌ಪಿ): ‘ಬ್ರೆಕ್ಸಿಟ್‌ ಬಳಿಕ ಬ್ರಿಟನ್‌ ಜತೆ ಮಹತ್ವದ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ಮೂರು ದಿನಗಳ ಬ್ರಿಟನ್‌ ಪ್ರವಾಸ ಕೈಗೊಂಡಿರುವ ಟ್ರಂಪ್‌, ಎರಡನೇ ದಿನವಾದ ಮಂಗಳವಾರ ಪ್ರಧಾನಿ ತೆರೆಸಾ ಮೇ ಅವರ ಜತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದ್ದಾರೆ.

‘ಐರೋಪ್ಯ ಒಕ್ಕೂಟದ ಹಿಡಿತದಿಂದ ಹೊರಬಂದ ಬಳಿಕ ಒಪ್ಪಂದ ಮಾಡಿಕೊಳ್ಳಲಾಗುವುದು. ಇದರಿಂದ, ಬೃಹತ್‌ ಪ್ರಮಾಣದ ವಹಿವಾಟು ಕೈಗೊಳ್ಳಲು ಅನುಕೂಲವಾಗಲಿದೆ. ಈ ಒಪ್ಪಂದವು ನ್ಯಾಯೋಚಿತವಾಗಿರುತ್ತದೆ. ಅಮೆರಿಕ ಜತೆ ಬಲಿಷ್ಠವಾದ ಆರ್ಥಿಕ ಮೈತ್ರಿ ಮಾಡಿಕೊಳ್ಳಲು ಬ್ರಿಟನ್‌ ಮುಂದಾಗಬೇಕು’ ಎಂದು ಹೇಳಿದ್ದಾರೆ.

ADVERTISEMENT

ಇದೇ ಜೂನ್‌ 7ರಂದು ಪ್ರಧಾನಿ ಹುದ್ದೆಗೆ ತೆರೆಸಾ ಮೇ ಅವರು ರಾಜೀನಾಮೆ ನೀಡುತ್ತಿರುವುದನ್ನು ಪ್ರಸ್ತಾಪಿಸಿದ ಟ್ರಂಪ್‌, ‘ತೆರೆಸಾ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ದೇಶವನ್ನು ಪ್ರಗತಿಯತ್ತ ಕೊಂಡೊಯ್ದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬ್ರೆಕ್ಸಿಟ್‌ ಬಗ್ಗೆ ಪ್ರಸ್ತಾಪಿಸಿದ ಅವರು, ’ಬ್ರಿಟನ್‌ ಶ್ರೇಷ್ಠ ರಾಷ್ಟ್ರ. ತನ್ನ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಬಯಸುತ್ತಿದೆ. ತನ್ನದೇ ಆದ ಗಡಿಗಳು ಅದಕ್ಕೆ ಬೇಕಾಗಿದೆ. ಜತೆಗೆ, ತನ್ನ ವ್ಯವಹಾರವನ್ನು ತಾನೇ ನೋಡಿಕೊಳ್ಳಲು ಬಯಸುತ್ತಿದೆ‘ ಎಂದು ಹೇಳಿದ್ದಾರೆ.

ಬ್ರೆಕ್ಸಿಟ್‌ ವಿಷಯದಲ್ಲಿ ತೆರೆಸಾ ಮೇ ಅವರ ಕಾರ್ಯತಂತ್ರವನ್ನು ಟ್ರಂಪ್‌ ಈ ಮೊದಲು ಟೀಕಿಸಿದ್ದರು. ಆದರೆ, ಈಗ ಯಾವುದೇ ಒಪ್ಪಂದ ಮಾಡಿಕೊಳ್ಳದೆ ಐರೋಪ್ಯ ಒಕ್ಕೂಟದಿಂದ ನಿರ್ಗಮಿಸಬೇಕು ಎಂದು ಡೊನಾಲ್ಡ್‌ ಟ್ರಂಪ್‌ ಬ್ರಿಟನ್‌ಗೆ ಒತ್ತಾಯಿಸಿದ್ದಾರೆ.

ಐರೋಪ್ಯ ಒಕ್ಕೂಟ ವ್ಯಾಪ್ತಿಯ ಹೊರಗೆಯೂ ಆರ್ಥಿಕ ಸಹಭಾಗಿತ್ವ ಹೊಂದುವ ಬಗ್ಗೆ ಬ್ರಿಟನ್‌ ಹೆಚ್ಚು ಆಸಕ್ತಿ ವಹಿಸಲಿದೆ ಎಂದು ತೆರೆಸಾ ಮೇ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

‘5ಜಿ’ ಜಾಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ಚೀನಾದ ಹುವೈ ಕಂಪನಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಬ್ರಿಟನ್‌ ಮುಂದಾಗಿರುವ ವಿಷಯವೂ ಉಭಯ ರಾಷ್ಟ್ರಗಳ ನಡುವೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ, ಯಾವುದೇ ಕಾರಣಕ್ಕೂ ತೆರೆಸಾ ಅವರು ಈ ವಿಷಯದಲ್ಲಿ ಕ್ಷಮೆಯಾಚಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕ ಜತೆಗೆ, ಇರಾನ್‌ ಜತೆ ಸಂಬಂಧ ಮತ್ತು ಜಾಗತಿಕ ತಾಪಮಾನ ವಿಷಯಗಳು ಸಹ ಪ್ರಸ್ತಾಪಿಸುವ ಸಾಧ್ಯತೆ ಇದೆ. ಬುಧವಾರ ಟ್ರಂಪ್‌ ಪ್ರವಾಸ ಮುಕ್ತಾಯಗೊಳ್ಳಲಿದೆ.

ಲಂಡನ್‌ನಲ್ಲಿ ಟ್ರಂಪ್‌ ವಿರುದ್ಧ ಪ್ರತಿಭಟನೆ

ಟ್ರಂಪ್‌ ಅವರ ನೀತಿಗಳನ್ನು ವಿರೋಧಿಸಿ ಸಾವಿರಾರು ಮಂದಿ ಲಂಡನ್‌ನಲ್ಲಿ ಪ್ರತಿಭಟನೆ ನಡೆಸಿದರು.

ಟ್ರಂಪ್‌ ಅವರ ದ್ವೇಷದ ಮತ್ತು ವಿಭಜನೆ ರಾಜಕೀಯ ನೀತಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಲಿಯೊ ಮುರ್ರೆ ತಿಳಿಸಿದ್ದಾರೆ.

‘ಜಾಗತಿಕ ತಾಪಮಾನ, ವಿದೇಶಾಂಗ ನೀತಿ ಸೇರಿದಂತೆ ಪ್ರತಿಯೊಂದು ವಿಷಯದಲ್ಲಿ ಟ್ರಂಪ್‌ ತಪ್ಪು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಜತೆಗೆ ಸ್ತ್ರೀ ದ್ವೇಷಿಯಾಗಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

ವಲಸಿಗರ ವಿಷಯದಲ್ಲಿ ಟ್ರಂಪ್‌ ಅವರು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು. ‘ಬೇಬಿ ಟ್ರಂಪ್‌’ ಗೊಂಬೆ ಪ್ರದರ್ಶಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್‌, ’ಸಣ್ಣ ಪ್ರತಿಭಟನೆ ವ್ಯಕ್ತವಾಗಿದ್ದನ್ನು ಮಾತ್ರ ನಾನು ನೋಡಿದ್ದೇನೆ. ಕೆಲವೇ ಜನರಿದ್ದರು. ಪ್ರತಿಭಟನೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ‘ ಎಂದರು.

‘ರಕ್ಷಣಾ ವೆಚ್ಚ ಹೆಚ್ಚಿಸಬೇಕು’

‘ನ್ಯಾಟೊ ಮೈತ್ರಿಕೂಟ ರಾಷ್ಟ್ರಗಳು ರಕ್ಷಣಾ ವೆಚ್ಚವನ್ನು ಹೆಚ್ಚಿಸಬೇಕು. ಪ್ರಧಾನಿ ತೆರೆಸಾ ಮೇ ಸಹ ಈ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ‘ ಎಂದು ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.