ಒಟ್ಟಾವ (ರಾಯಿಟರ್ಸ್): ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುವ ಸಂಬಂಧ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಳ್ಳಿಹಾಕಿದ್ದಾರೆ.
‘ಕೆನಡಾವು ಅಮೆರಿಕದ ಜತೆ ವಿಲೀನವಾಗುವ ಸಾಧ್ಯತೆಯೇ ಇಲ್ಲ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಟ್ರುಡೊ ಅವರು ಸೋಮವಾರ ಘೋಷಿಸಿದ್ದರು. ಅದರ ಬೆನ್ನಲ್ಲೇ ಟ್ರಂಪ್, ಕೆನಡಾವನ್ನು ಅಮೆರಿಕದ ಜತೆ ವಿಲೀನಗೊಳಿಸುವ ಮಾತನ್ನಾಡಿದ್ದರು.
ಕೆನಡಾವನ್ನು ಅಮೆರಿಕದ ಜತೆ ಸೇರಿಸಲು ಸೇನಾ ಬಲವನ್ನು ಬಳಸುವಿರಾ ಎಂಬ ಪ್ರಶ್ನೆಗೆ ಟ್ರಂಪ್, ‘ಸೇನಾ ಬಲ ಬಳಸುವುದಿಲ್ಲ. ಆರ್ಥಿಕ ಬಲವನ್ನು ಬಳಸಿ ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿಸಲಾಗುವುದು’ ಎಂದಿದ್ದರು.
ಕೆನಡಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಈಚೆಗೆ ಹೇಳಿದ್ದರು.
‘ಟ್ರಂಪ್ ಹೇಳಿಕೆಯು ಕೆನಡಾದ ಸಾಮರ್ಥ್ಯದ ಬಗ್ಗೆ ಅವರ ತಿಳುವಳಿಕೆಯ ಕೊರತೆಯನ್ನು ತೋರಿಸುತ್ತದೆ. ಯಾವುದೇ ಬೆದರಿಕೆಗೆ ನಾವು ಮಣಿಯುವುದಿಲ್ಲ’ ಎಂದು ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.