ವ್ಲಾಡಿಮಿರ್ ಪುಟಿನ್ ಹಾಗೂ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿನಂದಿಸಿದ್ದಾರೆ.
ರಷ್ಯಾ ಹಾಗೂ ಅಮೆರಿಕಾ ನಡುವಿನ ದ್ವಿಪಕ್ಷೀಯ ಸಂಬಂಧವು ಟ್ರಂಪ್ ಆಡಳಿತದಲ್ಲಿ ಇನ್ನಷ್ಟು ವೃದ್ಧಿಗೊಳ್ಳುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ರಷ್ಯಾದ ಭದ್ರತಾ ಮಂಡಳಿಯೊಂದಿಗೆ ವಿಡಿಯೊ ಸಂವಾದ ನಡೆಸಿದ ಸಂದರ್ಭದಲ್ಲಿ ಮಾತನಾಡಿರುವ ಪುಟಿನ್, ‘ರಷ್ಯಾದೊಂದಿಗೆ ನೇರ ಸಂಪರ್ಕವನ್ನು ಹೊಂದುವ ಡೊನಾಲ್ಡ್ ಟ್ರಂಪ್ ಹಾಗೂ ಅವರ ತಂಡದ ಹೇಳಿಕೆಗಳನ್ನು ಸ್ವಾಗತಿಸುತ್ತೇನೆ. ಆದರೆ ಬೈಡನ್ ಸರ್ಕಾರದಲ್ಲಿ ಸಕಾರಣವಿಲ್ಲದೇ ಇದನ್ನು ಸ್ಥಗಿತಗೊಳಿಸಲಾಗಿತ್ತು’ ಎಂದಿದ್ದಾರೆ.
‘ಮೂರನೇ ವಿಶ್ವ ಯುದ್ಧ ಸಂಭವಿಸದಂತೆ ತಡೆಯಲು ಸರ್ವ ಪ್ರಯತ್ನ ನಡೆಸುವ ಅವರ ಹೇಳಿಕೆ ಸ್ವಾಗತಾರ್ಹ. ಉಕ್ರೇನ್‌ನೊಂದಿಗೆ ಶಾಂತಿ ಮಾತುಕತೆಗೆ ಮಾಸ್ಕೊ ಸದಾ ಸಿದ್ಧವಿದೆ. ಇದು ಕೇವಲ ಅಲ್ಪಕಾಲದ ಒಪ್ಪಂದವಾಗಿರದೇ, ರಷ್ಯಾದ ಹಿತದಲ್ಲಿರುತ್ತದೆ ಎಂದು ಆಶಿಸುತ್ತೇನೆ. ಇದರೊಂದಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸುತ್ತೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.