ಟ್ರಂಪ್ ಪ್ರಮಾಣವಚನ: ವಿದೇಶಾಂಗ ಸಚಿವ ಜೈಶಂಕರ್‌ಗೆ ಮೊದಲ ಸಾಲಿನ ಆಸನ
ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಕ್ಯಾಪಿಟಲ್ ಭವನದ ಒಳಾಂಗಣದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಟ್ರಂಪ್ ಪದಗ್ರಹಣ ಮಾಡಿದರು. ಈ ವೇಳೆ ಭಾರತದ ಪರವಾಗಿ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗಿಯಾದರು.
ವಿಶೇಷವೆಂದರೆ ಎಸ್.ಜೈಶಂಕರ್ ಅವರಿಗೆ ಕಾರ್ಯಕ್ರಮದಲ್ಲಿ ಮೊದಲ ಸಾಲಿನ ಮೊದಲ ಸ್ಥಾನ ಮೀಸಲಿರಿಸಿದ್ದು ಭಾರಿ ಚರ್ಚೆಯಾಗಿದೆ. ಈ ಮೊದಲು ಟ್ರಂಪ್ ಅವರು ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾರತಕ್ಕೆ ಅಷ್ಟೊಂದು ಆದ್ಯತೆ ನೀಡುವುದಿಲ್ಲ. ಯಾರಿಗೂ ಆಹ್ವಾನ ಇರುವುದಿಲ್ಲ ಎಂದು ಕೆಲವರು ಚರ್ಚೆ ಮಾಡಿದ್ದರು. ಆದರೆ ಊಹಾಪೋಹಗಳು ಸುಳ್ಳಾದವು.
ಈ ಮೂಲಕ ಟ್ರಂಪ್ ಎರಡನೇ ಅವಧಿಯ ಆಡಳಿತದಲ್ಲಿ ಭಾರತವೇ ಪ್ರಮುಖ ಆದ್ಯತೆಯಾಗಿರಲಿದೆ ಎಂದು ಚರ್ಚೆಯಾಗುತ್ತಿದೆ.
ಇದೇ ವೇಳೆ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಪತ್ರವನ್ನು ಜೈಶಂಕರ್ ಹಸ್ತಾಂತರಿಸಿದರು. ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜೈಶಂಕರ್ ಅವರು ವಿಶೇಷ ಪ್ರತಿನಿಧಿಯಾಗಿ ಭಾರತವನ್ನು ಪ್ರತಿನಿಧಿಸಿದ್ದರು.
ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಲ್ಲಿ ವಿಶ್ವದ ಬಲಾಢ್ಯ ರಾಷ್ಟ್ರವಾಗಿರುವ ಅಮೆರಿಕದ ಚುಕ್ಕಾಣಿಯನ್ನು ಎರಡನೇ ಬಾರಿಗೆ ಹಿಡಿಯುವ ಮೂಲಕ ಟ್ರಂಪ್ ಇತಿಹಾಸ ನಿರ್ಮಿಸಿದರು.
ಅಮೆರಿಕದ ಸುವರ್ಣಯುಗ ಇದೀಗ ಪ್ರಾರಂಭವಾಗಿದೆ. ಅಮೆರಿಕವನ್ನು ಮತ್ತೆ ಜಗತ್ತಿನ ಶ್ರೇಷ್ಠ ರಾಷ್ಟ್ರವನ್ನಾಗಿಸಲು ದೇವರು ನನ್ನನ್ನು ಕಾಪಾಡಿದ್ದಾನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.