ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದಕ್ಕಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಅಥವಾ ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಇರಾನ್ ಸಂಘರ್ಷಗಳಲ್ಲಿ ಶಾಂತಿ ಮಾತುಕತೆ ಮೂಲಕ ಶಮನ ಮಾಡಿಕೊಳ್ಳಲು ಹೇಳಿದ್ದೆ. ನಾನು ಏನೇ ಮಾಡಿದರೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗೋ ಮತ್ತು ರುವಾಂಡಾ ನಡುವಿನ ಸಂಘರ್ಷ ಸಂಬಂಧ ಎರಡು ದೇಶಗಳ ನಡುವೆ ಒಪ್ಪಂದವನ್ನು ಏರ್ಷಡಿಸಿದ್ದೇನೆ. ರುವಾಂಡಾ ಮತ್ತು ಕಾಂಗೋದ ಪ್ರತಿನಿಧಿಗಳು ಸೋಮವಾರ ವಾಷಿಂಗ್ಟನ್‌ಗೆ ಆಗಮಿಸಲಿದ್ದಾರೆ. ಒಪ್ಪಂದ ಸಂಬಂಧ ದಾಖಲೆಗಳಿಗೆ ಸಹಿ ಹಾಕಲಿದ್ದಾರೆ. ಈ ಮೂಲಕ ಆಫ್ರಿಕಾಕ್ಕೆ ಶ್ರೇಷ್ಠ ದಿನ ಮತ್ತು ಜಗತ್ತಿಗೂ ಉತ್ತಮ ದಿನವಾಗಲಿದೆ ಎಂದು ತಿಳಿಸಿದ್ದಾರೆ.
ಇಂತಹ ಅನೇಕ ಸಂಘರ್ಷಗಳಲ್ಲಿ ಮಧ್ಯಸ್ಥಿಕೆ ವಹಿಸಿ ಹೆಚ್ಚಿನ ರಕ್ತಪಾತವಾಗದಂತೆ, ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಅನೇಕ ದೇಶಗಳಿಗೆ ಸಲಹೆ ನೀಡಿದ್ದೇನೆ. ಆದಗ್ಯೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯುವುದಿಲ್ಲ ಎಂದು ಹೇಳಿದ್ದಾರೆ.
ಆದರೆ ಭೀಕರ ಯುದ್ಧಗಳು ನಡೆಯದಂತೆ ತಡೆಯುವಲ್ಲಿ ನನ್ನ ಪಾತ್ರದ ಬಗ್ಗೆ ಜನರಿಗೆ ತಿಳಿದಿದೆ. ಅಷ್ಟೇ ಸಾಕು ಎಂದು ಟ್ರಂಪ್ ತಿಳಿಸಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.
ಭಾರತವು ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್‌ಗೆ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್, ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.