ADVERTISEMENT

ನನ್ನ ಸಿದ್ಧಾಂತಗಳ ಜಾರಿಗೆ ಭಾರತದ US ರಾಯಭಾರಿಯಾಗಿ ಸರ್ಗಿಯೊ ಗೋರ್ ನೇಮಕ: ಟ್ರಂಪ್

ಪಿಟಿಐ
Published 23 ಆಗಸ್ಟ್ 2025, 5:46 IST
Last Updated 23 ಆಗಸ್ಟ್ 2025, 5:46 IST
<div class="paragraphs"><p>ಡೊನಾಲ್ಡ್ ಟ್ರಂಪ್, ಸರ್ಗಿಯೊ ಗೋರ್</p></div>

ಡೊನಾಲ್ಡ್ ಟ್ರಂಪ್, ಸರ್ಗಿಯೊ ಗೋರ್

   

ಎಕ್ಸ್ ಚಿತ್ರ

ವಾಷಿಂಗ್ಟನ್‌: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಆಪ್ತ ಹಾಗೂ ಶ್ವೇತಭವನದಲ್ಲಿ ಅಧ್ಯಕ್ಷರ ಖಾಸಗಿ ಕಚೇರಿಯ ನಿರ್ದೇಶಕ ಸರ್ಗಿಯೊ ಗೋರ್‌ ಅವರನ್ನು ಭಾರತದ ಅಮೆರಿಕ ರಾಯಭಾರಿಯನ್ನಾಗಿ ಶನಿವಾರ ನೇಮಕ ಮಾಡಲಾಗಿದೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಷಯ ಹಂಚಿಕೊಂಡಿರುವ ಟ್ರಂಪ್, ‘ನನ್ನ ಉತ್ತಮ ಗೆಳೆಯ ಗೋರ್‌, ಕಳೆದ ಹಲವು ವರ್ಷಗಳಿಂದ ನನ್ನ ಪರವಾಗಿದ್ದಾರೆ. ಅವರನ್ನು ಭಾರತ ಗಣರಾಜ್ಯದಲ್ಲಿ ಅಮೆರಿಕದ ಮುಂದಿನ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಇದರೊಂದಿಗೆ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿಯಾಗಿಯೂ ಅವರು ಕೆಲಸ ಮಾಡಲಿದ್ದಾರೆ’ ಎಂದಿದ್ದಾರೆ.

ಸುಂಕದ ವಿಷಯದಲ್ಲಿ ನವದೆಹಲಿ ಮತ್ತು ವಾಷಿಂಗ್ಟನ್ ನಡುವೆ ಪರಿಸ್ಥಿತಿ ಬಿಗಡಾಯಿಸಿರುವ ಬೆನ್ನಲ್ಲೇ ಟ್ರಂಪ್ ಈ ಘೋಷಣೆ ಮಾಡಿದ್ದಾರೆ.

‘ಗೋರ್ ಮತ್ತು ಅವರ ತಂಡವು ವಿವಿಧ ಇಲಾಖೆಗಳಿಗೆ ದಾಖಲೆ ಸಮಯದಲ್ಲಿ ಸುಮಾರು ನಾಲ್ಕು ಸಾವಿರ ನೌಕರರನ್ನು ನೇಮಕ ಮಾಡಿಕೊಂಡಿದೆ. ಆ ಮೂಲಕ ಶೇ 95ರಷ್ಟು ಹುದ್ದೆಗಳು ಭರ್ತಿಯಾಗಿದ್ದು, ಅವರೆಲ್ಲರೂ ಈಗ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ.

‘ಸಂಸತ್ತು ಒಪ್ಪಿಗೆ ನೀಡುವವರೆಗೂ ಗೋರ್ ಅವರು ತಮ್ಮ ಸದ್ಯದ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ. ನನ್ನ ಐತಿಹಾಸಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋರ್ ಸಾಕಷ್ಟು ಕೆಲಸ ಮಾಡಿದ್ದರು. ನನ್ನ ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಮತ್ತು ನಮ್ಮ ಅಭಿಯಾನವನ್ನು ಬೆಂಬಲಿಸಿ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟಿದ್ದಾರೆ. ಆಡಳಿತದಲ್ಲಿ ಗೋರ್ ಅವರ ಪಾತ್ರವು ಅವರ ರಾಜಕೀಯ ಮನ್ನಣೆಗೆ ಅತ್ಯಗತ್ಯವಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.

‘ಜಗತ್ತಿನ ಅತ್ಯಂತ ಜನಸಂಖ್ಯೆ ಇರುವ ರಾಷ್ಟ್ರದಲ್ಲಿ ನಾನು ಅತಿ ಹೆಚ್ಚು ನಂಬಿಕೆ ಇಟ್ಟಿರುವ ವ್ಯಕ್ತಿಯನ್ನು ನೇಮಿಸುವ ಅಗತ್ಯವಿತ್ತು. ಆ ಮೂಲಕ ನನ್ನ ಸಿದ್ಧಾಂತವನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಅಮೆರಿಕವನ್ನು ಮತ್ತೆ ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲಾಗುವುದು. ಸರ್ಗಿಯೊ ಅವರು ಉತ್ತಮ ರಾಯಭಾರಿಯಾಗಲಿದ್ದಾರೆ. ಅವರಿಗೆ ಅಭಿನಂದನೆಗಳು’ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.

‘ನಂಬಿಕೆ ಮತ್ತು ಭರವಸೆಯೊಂದಿಗೆ ಟ್ರಂಪ್ ಅವರು ನನ್ನನ್ನು ಭಾರತದ ಅಮೆರಿಕ ರಾಯಭಾರಿಯನ್ನಾಗಿ ಮತ್ತು ದಕ್ಷಿಣ ಹಾಗೂ ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿಯನ್ನಾಗಿಯೂ ನೇಮಿಸಿದ್ದಾರೆ. ಅಮೆರಿಕವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ನನ್ನ ಬದುಕಿನ ವಿಶೇಷ ಗೌರವ’ ಎಂದು ಗೋರ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರೂ ಸರ್ಗಿಯೊ ಗೋರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 

ಗೋರ್ ಅವರು ನವದೆಹಲಿಯಲ್ಲಿದ್ದ ಎರಿಕ್ ಗ್ರಸೆಟ್ಟಿ ಅವರ ಸ್ಥಾನವನ್ನು ತುಂಬಲಿದ್ದಾರೆ. ಗ್ರಸೆಟ್ಟಿ ಅವರು 2023ರ ಮೇಯಿಂದ 2025ರ ಜನವರಿವರೆಗೂ ನವದೆಹಲಿಯಲ್ಲಿ ಅಮೆರಿಕದ ರಾಯಭಾರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.