ADVERTISEMENT

ಇವಿ ಸಬ್ಸಿಡಿಗೂ ಹೆಚ್ಚಿನದನ್ನು ಮಸ್ಕ್ ಕಳೆದುಕೊಳ್ಳಬಹುದು: ಡೊನಾಲ್ಡ್‌ ಟ್ರಂಪ್‌

ಏಜೆನ್ಸೀಸ್
Published 1 ಜುಲೈ 2025, 15:53 IST
Last Updated 1 ಜುಲೈ 2025, 15:53 IST
ಇಲಾನ್‌ ಮಸ್ಕ್‌, ಡೊನಾಲ್ಡ್‌ ಟ್ರಂಪ್‌
ಇಲಾನ್‌ ಮಸ್ಕ್‌, ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ‘ತೆರಿಗೆ ಮತ್ತು ಖರ್ಚು ಮಸೂದೆ ಜಾರಿಗೊಂಡರೆ ಉದ್ಯಮಿ ಇಲಾನ್‌ ಮಸ್ಕ್‌ ಅವರು ಎಲೆಕ್ಟ್ರಿಕ್‌ ವಾಹನಗಳ ಸಬ್ಸಿಡಿಗಿಂತ ಹೆಚ್ಚಿನದನ್ನು ಕಳೆದುಕೊಳ್ಳುವರು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

‘ಇಲಾನ್‌ ಮಸ್ಕ್‌ ಅವರ ಮೇಲೆಯೇ ಅಮೆರಿಕ ಸರ್ಕಾರದ ದಕ್ಷತಾ ಇಲಾಖೆಯಿಂದ (ಡಿಒಜಿಇ) ಕ್ರಮ ಜರುಗಿಸಬೇಕಾಗಬಹುದು. ಆ ಮೂಲಕ ಅವರಿಗೆ ನೀಡಿರುವ ತೆರಿಗೆ ವಿನಾಯಿತಿಗಳಿಗೆ ಕತ್ತರಿ ಹಾಕಬೇಕಾದೀತು. ಮಸ್ಕ್ ಅವರನ್ನೇ ಡಿಒಜಿಇ ನುಂಗಿಹಾಕಬಹುದು’ ಎಂದು ಫ್ಲಾರಿಡಾ ಪ್ರವಾಸಕ್ಕೆ ತೆರಳುವ ಮುನ್ನ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಫೆಡರಲ್‌ ಆಡಳಿತದ ಖರ್ಚು, ವೆಚ್ಚಗಳನ್ನು ಕಡಿಮೆಗೊಳಿಸಲು ಟ್ರಂಪ್‌ ಅವರು ಡಿಒಜಿಇ ನೇತೃತ್ವವನ್ನು ಮಸ್ಕ್‌ ಅವರಿಗೆ ವಹಿಸಿದ್ದರು. ಮಸ್ಕ್‌ ಅವರು ಎಲೆಕ್ಟ್ರಿಕ್‌ ವಾಹನ ಕಂಪನಿ ಹಾಗೂ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್‌ ಎಕ್ಸ್‌’ನ ಒಡೆತನ ಹೊಂದಿದ್ದಾರೆ. ಜತೆಗೆ, ಅಮೆರಿಕ ಸರ್ಕಾರದೊಂದಿಗೆ ಲಾಭದಾಯಕ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ.

ADVERTISEMENT

ಟ್ರಂಪ್‌ ಅವರ ತೆರಿಗೆ ಮತ್ತು ಖರ್ಚು ಮಸೂದೆಯನ್ನು ವಿರೋಧಿಸಿ ಮಸ್ಕ್‌ ಟೀಕೆ ಮಾಡಲು ಆರಂಭಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರೂ ಪರಸ್ಪರ ಆರೋಪ–ಪ್ರತ್ಯಾರೋಪ ಮಾಡಿದ್ದರು.

ಮಸ್ಕ್‌ ಗಡೀಪಾರು ಎಚ್ಚರಿಕೆ

ಉದ್ಯಮಿ ಇಲಾನ್‌ ಮಸ್ಕ್‌ ಅವರನ್ನು ಗಡೀಪಾರು ಮಾಡುವ ಎಚ್ಚರಿಕೆಯನ್ನು ಕೂಡ ಡೊನಾಲ್ಡ್‌ ಟ್ರಂಪ್‌ ನೀಡಿದ್ದಾರೆ.

ಟ್ರಂಪ್‌ ಅವರು ‘ಟ್ರುಥ್‌ ಸೋಷಿಯಲ್‌’ನಲ್ಲಿ ಸೋಮವಾರ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ‘ತಮ್ಮ ಅಂಗಡಿಯನ್ನು ಮುಚ್ಚಿ ದಕ್ಷಿಣ ಆಫ್ರಿಕಾಗೆ ಅವರು ಹಿಂದಿರುಗಬೇಕಾಗಬಹುದು’ ಎಂದು ಎಚ್ಚರಿಸಿದ್ದಾರೆ.

‘ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಕಡ್ಡಾಯಗೊಳಿಸುವುದರ ವಿರುದ್ಧ ನಾನು ಇದ್ದುದು ಮಸ್ಕ್‌ಗೆ ತಿಳಿದಿತ್ತು. ನನ್ನ ಚುನಾವಣಾ ಪ್ರಚಾರದ ವೇಳೆಯಲ್ಲೂ ಇದನ್ನೇ ಹೇಳಿದ್ದೆ. ಎಲೆಕ್ಟ್ರಿಕ್‌ ಕಾರು ಒಳ್ಳೆಯದೇ. ಆದರೆ ಅವುಗಳನ್ನೇ ಖರೀದಿಸುವಂತೆ ಒತ್ತಡ ಹೇರುವುದು ಸರಿಯಲ್ಲ’ ಎಂದಿದ್ದಾರೆ.

ಇದಕ್ಕೆ ಮತ್ತೊಂದು ಸಾಮಾಜಿಕ ಮಾಧ್ಯಮದ ಪೋಸ್ಟ್‌ ಮೂಲಕ ಮಸ್ಕ್ ಪ್ರತಿಕ್ರಿಯಿಸಿದ್ದು ‘ಈ ವಿಷಯವನ್ನು ಇನ್ನಷ್ಟು ವಿಸ್ತರಿಸುತ್ತಾ ಹೋಗಲು ನನಗೂ ಹುಮ್ಮಸ್ಸು ಮೂಡುತ್ತಿದೆ. ಆದರೆ ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.