ADVERTISEMENT

ಉಕ್ಕು, ಅಲ್ಯುಮಿನಿಯಂ ಆಮದು: ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದ ಅಮೆರಿಕ

ಕೆನಡಾ, ಮೆಕ್ಸಿಕೊ ಸೇರಿ ವಿವಿಧ ದೇಶಗಳ ಮೇಲೆ ಪರಿಣಾಮ

ಏಜೆನ್ಸೀಸ್
Published 10 ಫೆಬ್ರುವರಿ 2025, 13:32 IST
Last Updated 10 ಫೆಬ್ರುವರಿ 2025, 13:32 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಕೆನಡಾ, ಮೆಕ್ಸಿಕೊ ಸೇರಿದಂತೆ ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳುವ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಅಮೆರಿಕ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕವನ್ನು ವಿಧಿಸಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಘೋಷಿಸಿದರು.

ಜತೆಗೆ, ಕೆಲವೇ ದಿನಗಳಲ್ಲಿ ಇನ್ನಷ್ಟು ಆಮದುಗಳ ಮೇಲೆ ಸುಂಕಗಳನ್ನು ವಿಧಿಸಲಾಗುವುದು ಎಂದು ಅವರು ಸುಳಿವು ನೀಡಿದರು.

‘ಸೂಪರ್‌ ಬೌಲ್‌’ ಪ್ರೀ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಲು ಫ್ಲಾರಿಡಾದಿಂದ ನ್ಯೂ ಓರ್ಲಿಯನ್ಸ್‌ಗೆ ತೆರಳುವ ಮುನ್ನ ಸುದ್ದಿಗಾರರರ ಜತೆ ಮಾತನಾಡಿದ ಅವರು, ‘ಅಮೆರಿಕಕ್ಕೆ ಬರುವ ಎಲ್ಲ ಬಗೆಯ ಉಕ್ಕು ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕವನ್ನು ಹೊಂದಿರುತ್ತವೆ. ಇದರಲ್ಲಿ ಅಲ್ಯೂಮಿನಿಯಂ ಸಹ ಸೇರಿದೆ’ ಎಂದರು.

ADVERTISEMENT

ಅಮೆರಿಕದ ಸರಕುಗಳ ಮೇಲೆ ಸುಂಕ ವಿಧಿಸುತ್ತಿರುವ ದೇಶಗಳಿಂದ ಅಮೆರಿಕಕ್ಕೆ ಬರುತ್ತಿರುವ ಸರಕುಗಳ ಮೇಲೂ ಆಮದು ಸುಂಕ ವಿಧಿಸಲಾಗುವುದು. ಅದನ್ನು  ಮಂಗಳವಾರ ಅಥವಾ ಬುಧವಾರದಿಂದ ಇನ್ನಷ್ಟು ಸುಂಕಗಳನ್ನು ಘೋಷಿಸುವುದಾಗಿ ಅವರು ಇದೇ ವೇಳೆ ತಿಳಿಸಿದರು. 

‘ನಮ್ಮ ಸರಕುಗಳಿಗೆ ಕೆಲ ದೇಶಗಳು ಶೇ 130ರಷ್ಟು ಸುಂಕ ವಿಧಿಸುತ್ತಿರುವಾಗ, ನಾವು ಅವರ ಸರಕುಗಳಿಗೆ ಯಾವುದೇ ಸುಂಕ ವಿಧಿಸದಿದ್ದರೆ ಹೇಗೆ? ಇದು ಹಾಗೇ ಮುಂದುವರಿಯಬಾರದು’ ಎಂದು ಅವರು ಪ್ರತಿಕ್ರಿಯಿಸಿದರು.

ಕೆನಡಾ ಸೆಳೆಯಲು ಗಂಭೀರ ಯತ್ನ:

‘ಕೆನಡಾವು ಅಮೆರಿಕದ 51ನೇ ರಾಜ್ಯವಾಗಬೇಕು ಎಂದು ನಾನು ಗಂಭೀರವಾಗಿ ಬಯಸುತ್ತಿದ್ದೇನೆ’ ಎಂದು ಡೊನಾಲ್ಡ್‌ ಟ್ರಂಪ್‌ ಪುನರುಚ್ಚರಿಸಿದರು.

ಸೂಪರ್‌ ಬೌಲ್‌ ಪ್ರೀ ಶೋ ಸಂದರ್ಭದಲ್ಲಿ ಅವರು ‘ಫಾಕ್ಸ್‌ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ತಿಳಿಸಿದರು.

‘ಅಮೆರಿಕದ 51ನೇ ರಾಜ್ಯವಾಗಿ ಕೆನಡಾ ಸೇರ್ಪಡೆ ಆದರೆ, ಕೆನಡಾಕ್ಕೇ ಹೆಚ್ಚು ಅನುಕೂಲವಾಗುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದ ಅವರು, ‘ಕೆನಡಾದಿಂದ ನಮಗೆ ವರ್ಷಕ್ಕೆ 200 ಶತಕೋಟಿ ಡಾಲರ್‌ ನಷ್ಟವಾಗುತ್ತಿದೆ. ಇನ್ನು ಇದಕ್ಕೆಲ್ಲ ನಾನು ಅವಕಾಶ ನೀಡುವುದಿಲ್ಲ’ ಎಂದರು.

ಕೆನಡಾ ಅಮೆರಿಕದ ನಿಕಟ ಮಿತ್ರ ರಾಷ್ಟ್ರವಾಗಿದೆ. ಅಮೆರಿಕ ಜತೆಗಿನ ವ್ಯಾಪಾರ ಕೆನಡಾಕ್ಕೆ ಬಹು ಮುಖ್ಯ ಎಂದ ಅವರು, ನ್ಯಾಟೊ ಸ್ಥಾಪಕ ಸದಸ್ಯ ರಾಷ್ಟ್ರವಾಗಿರುವ ಅದು ತನ್ನ ಸೇನಾ ರಕ್ಷಣೆಗಾಗಿ ಅಮೆರಿಕವನ್ನು ಅವಲಂಬಿಸುವಂತಿಲ್ಲ ಎಂದು ಎಚ್ಚರಿಸಿದರು.

‘ಕೆನಡಾ ದೇಶವು ಮಿಲಿಟರಿಗೆ ಹೆಚ್ಚು ವೆಚ್ಚ ಮಾಡುತ್ತಿಲ್ಲ. ಏಕೆಂದರೆ ಅಮೆರಿಕ ಅದರ ರಕ್ಷಣೆಗೆ ಬರುತ್ತದೆ ಎಂದು ಅವರು ಭಾವಿಸಿದ್ದಾರೆ. ಆದರೆ ಇದು ಅವರ ಊಹೆಯಷ್ಟೆ. ಇನ್ನೊಂದು ದೇಶವನ್ನು ನಾವೇಕೆ ರಕ್ಷಿಸುತ್ತೇವೆ’ ಎಂದು ಅವರು ಪ್ರಶ್ನಿಸಿದರು.

ಟ್ರಂಪ್‌ ಹೇಳಿಕೆಯ ಪ್ರಮುಖಾಂಶಗಳು...

  • ಶೀಘ್ರದಲ್ಲೇ ಇನ್ನಷ್ಟು ಆಮದು ಸುಂಕ ಪ್ರಕಟ

  • ನಮ್ಮ ಸರಕುಗಳಿಗೆ ಸುಂಕ ವಿಧಿಸಿದರೆ, ಪ್ರತಿಯಾಗಿ ನಾವೂ ವಿಧಿಸುತ್ತೇವೆ

  • ಕೆನಡಾವು ಅಮೆರಿಕದ 51ನೇ ರಾಜ್ಯವಾದರೆ ಅದಕ್ಕೆ ಅನುಕೂಲ

‘ಭಾರತದ ಮೇಲೆ ಪರಿಣಾಮ ಬೀರದು’

‘ಅಮೆರಿಕವು ಉಕ್ಕಿನ ಆಮದು ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಮಾಡಿರುವ ಘೋಷಣೆಯಿಂದ ಭಾರತೀಯ ಉದ್ಯಮದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ’ ಎಂದು ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್‌ ಪೌಂಡ್ರಿಕ್‌ ಸೋಮವಾರ ತಿಳಿಸಿದ್ದಾರೆ. ದೇಶೀಯ ಉಕ್ಕು ಮಾರುಕಟ್ಟೆ ಪ್ರಬಲವಾಗಿದ್ದು ಸಣ್ಣ ಪ್ರಮಾಣದಲ್ಲಿ ಅಮೆರಿಕಕ್ಕೆ ರಫ್ತಾಗುತ್ತಿದೆ. ಆದ್ದರಿಂದ ಗಂಭೀರ ಪರಿಣಾಮ ಉಂಟಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ‘ಭಾರತವು ಕಳೆದ ವರ್ಷ 14.5 ಕೋಟಿ ಟನ್‌ಗಳಷ್ಟು ಉಕ್ಕನ್ನು ಉತ್ಪಾದಿಸಿದ್ದು ಅದರಲ್ಲಿ 95 ಸಾವಿರ ಟನ್‌ ಅನ್ನು ಅಮೆರಿಕಕ್ಕೆ ರಫ್ತು ಮಾಡಿದೆ. ಭಾರತದಲ್ಲಿ ದೇಶೀಯ ಮಾರುಕಟ್ಟೆಯಲ್ಲಿಯೇ ಉಕ್ಕಿಗೆ ತೀವ್ರ ಬೇಡಿಕೆಯಿದ್ದು ಮುಂಬರುವ ವರ್ಷಗಳಲ್ಲಿ ಅದನ್ನು ಪೂರೈಸುವದೇ ಕಷ್ಟವಾಗುತ್ತದೆ’ ಎಂದು ಅವರು ಸಮಾವೇಶವೊಂದರಲ್ಲಿ ತಿಳಿಸಿದ್ದಾರೆ. ಸವಾಲು: ಅಮೆರಿಕ ಎಲ್ಲ ಉಕ್ಕು ಮತ್ತು ಅಲ್ಯುಮಿನಿಯಂ ಆಮದುಗಳ ಮೇಲೆ ಹೆಚ್ಚುವರಿ ಶೇ 25ರಷ್ಟು ಸುಂಕ ವಿಧಿಸಿದರೆ ಭಾರತೀಯ ಉಕ್ಕು ಉತ್ಪಾದಕರು ತಮ್ಮ ಉತ್ಪನ್ನಗಳನ್ನು ರಫ್ತು ಮಾಡುವುದಕ್ಕೆ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಮೂಡೀಸ್‌ ರೇಟಿಂಗ್ಸ್‌ನ ಸಹಾಯಕ ಉಪಾಧ್ಯಕ್ಷ ಹುಯಿ ಟಿಂಗ್‌ ಸಿಮ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.