ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಂದೂಡುವ ಪ್ರಸ್ತಾವ ಮುಂದಿಟ್ಟ ಟ್ರಂಪ್‌

ಏಜೆನ್ಸೀಸ್
Published 31 ಜುಲೈ 2020, 1:54 IST
Last Updated 31 ಜುಲೈ 2020, 1:54 IST
ಡೊನಾಲ್ಡ್ ಟ್ರಂಪ್‌
ಡೊನಾಲ್ಡ್ ಟ್ರಂಪ್‌   

ವಾಷಿಂಗ್ಟನ್‌: ‘ಕೊರೊನಾ ವೈರಸ್‌ ದೇಶದಲ್ಲಿ ವ್ಯಾಪಿಸುತ್ತಿದೆ. ಚುನಾವಣೆಯಲ್ಲಿ ನಕಲಿ ಮತದಾನ ನಡೆಯುವ ಸಾಧ್ಯತೆಗಳಿವೆ’ ಎಂಬ ಆತಂಕ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗಾಗಲೇ ನಿಗದಿಯಾಗಿರುವ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡುವ ಕುರಿತು ಮಾತಾಡಿದ್ದಾರೆ.

‘ಮೇಲ್-ಇನ್ ಮತದಾನದೊಂದಿಗೆ 2020ರ ಚುನಾವಣೆಯು ಇತಿಹಾಸದಲ್ಲೇ ಅತ್ಯಂತ ಕೆಟ್ಟ ಮತ್ತು ಮೋಸದ ಚುನಾವಣೆಯಾಗಿ ಉಳಿಯಲಿದೆ. ಇದು ಅಮೆರಿಕಕ್ಕೆ ದೊಡ್ಡ ಮುಜುಗರವನ್ನುಂಟು ಮಾಡುತ್ತದೆ. ಜನರು ಸೂಕ್ತ ರೀತಿಯಲ್ಲಿ, ಸುರಕ್ಷಿತವಾಗಿ ಮತ ಚಲಾಯಿಸುವವರೆಗೆ ಚುನಾವಣೆಯನ್ನು ಮುಂದಕ್ಕೆ ಹಾಕಬಹುದೇ? ಎಂದು ಅವರು ಪ್ರಶ್ನಸಿದ್ದಾರೆ.

ಮತ್ತೊಂದೆಡೆ ಮಾತನಾಡಿರುವ ಅವರು, ‘ನಾನು ಚುನಾವಣೆ ಮುಂದೂಡಲು ಬಯಸುತ್ತೇನೆಯೇ? ಇಲ್ಲ. ಆದರೆ ಅಕ್ರಮ ಚುನಾವಣೆಯನ್ನು ನೋಡಲು ಬಯಸುವುದಿಲ್ಲ. ಅದೇನಾದರೂ ಸಂಭವಿಸಿದಲ್ಲಿ ಈ ಚುನಾವಣೆಯು ಇತಿಹಾಸದಲ್ಲಿ ಅತ್ಯಂತ ಕೆಟ್ಟ ಚುನಾವಣೆಯಾಗಲಿದೆ,’ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಇದೇ ನವೆಂಬರ್ 3 ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು, ಡೆಮಾಕ್ರಟಿಕ್‌ ಪಕ್ಷದ ಜೋ ಬಿಡೆನ್ ಅವರನ್ನು ಎದುರಿಸಲಿದ್ದಾರೆ. ಈಗಾಗಲೇ ಕಾನೂನಾತ್ಮಕವಾಗಿ ನಿಗದಿಯಾಗಿರುವ ಈ ಚುನಾವಣೆಯನ್ನು ಮುಂದಕ್ಕೆ ಹಾಕುವ ಯಾವುದೇ ಸಾಂವಿಧಾನಿಕ ಅಧಿಕಾರವನ್ನು ಟ್ರಂಪ್‌ ಹೊಂದಿಲ್ಲ. ಹೀಗಾಗಿ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.

ಚುನಾವಣೆಯನ್ನು ಮುಂದೂಡುವ ಟ್ರಂಪ್‌ ಆಲೋಚನೆಯು ಈ ವರೆಗಿನ ಅಧ್ಯಕ್ಷೀಯ ಚುನಾವಣೆಗಳ ಸಂಪ್ರದಾಯಗಳನ್ನು ಮುರಿದಂತಾಗಿದೆ. ಈಗಾಗಲೇ ಕೊರೊನಾ ವೈರಸ್‌ನ ದಾಳಿಯಿಂದ ನಲುಗಿರುವ ರಾಷ್ಟ್ರದಲ್ಲಿ ಅವರ ಮಾತು ಉದ್ವಿಗ್ನತೆ ಸೃಷ್ಟಿಸುತ್ತದೆ. ಅಲ್ಲದೆ, ದೇಶವನ್ನು ಪಕ್ಷಪಾತ ರಾಜಕೀಯದ ಅಂಚಿಗೆ ದೂಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಸಾಂಕ್ರಾಮಿಕ ಸಮಯದಲ್ಲಿ ಮತದಾರರನ್ನು ರಕ್ಷಿಸುವ ಮಾರ್ಗವಾಗಿ ಮೇಲ್-ಇನ್ ಮತದಾನವನ್ನು ದೊಡ್ಡ ಪ್ರಮಾಣದಲ್ಲಿ ಬಳಸುವುದು ಸಾಮೂಹಿಕ ವಂಚನೆಗೆ ಕಾರಣವಾಗುತ್ತದೆ ಎಂಬ ಅವರ ಸಮರ್ಥನೆಗೆ ಸಾಕ್ಷ್ಯಗಳೇ ಇಲ್ಲ ಎಂದು ಈಗಾಗಲೇ ಹಲವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.