ಟ್ರಂಪ್
ವಾಷಿಂಗ್ಟನ್: ‘‘ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದರೆ ಭಾರಿ ಸುಂಕ
ತೆರಬೇಕಾಗುತ್ತದೆ’ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
‘ರಷ್ಯಾದಿಂದ ಇನ್ನು ಮುಂದೆ ಕಚ್ಚಾತೈಲ ಖರೀದಿಸುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ’ ಎಂಬ ಹೇಳಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ‘ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ, ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸುತ್ತಲೇ ಇರುತ್ತೇವೆ. ಅವರು ಅದನ್ನು (ರಷ್ಯಾದಿಂದ ತೈಲ ಖರೀದಿ) ಮುಂದುವರಿಸಲು ಬಯಸುವುದಿಲ್ಲ’ ಎಂದು ಹೇಳಿದರು.
ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲಿದೆ’ ಎಂದು ಟ್ರಂಪ್ ಅಕ್ಟೋಬರ್ 15ರಂದು ಹೇಳಿದ್ದರು. ಅದನ್ನು ಅಲ್ಲಗಳೆದಿದ್ದ ಭಾರತ, ‘ಮಾರುಕಟ್ಟೆಯ ಬೇಡಿಕೆ ಆಧರಿಸಿ ವಿವಿಧ ದೇಶಗಳಿಂದ ತೈಲ ಖರೀದಿಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿತ್ತು. ‘ಟ್ರಂಪ್ ಮತ್ತು ಮೋದಿ ನಡುವೆ ಅ.15ರಂದು ದೂರವಾಣಿ ಸಂಭಾಷಣೆಯೇ ನಡೆದಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದರು.
ಭಾರತದ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಟ್ರಂಪ್, ‘ಭಾರತ ಅಂತಹ ಹೇಳಿಕೆ ನೀಡಿದೆ ಎಂದು ನಾನು ಭಾವಿಸುವುದಿಲ್ಲ. ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ರಷ್ಯಾದೊಂದಿಗೆ ತೈಲ
ಖರೀದಿಸುವುದಿಲ್ಲ ಎಂಬ ಭರವಸೆಯನ್ನು ಅವರು ನೀಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ರಷ್ಯಾದಿಂದ ಕಚ್ಚಾತೈಲ ಖರೀದಿಸುವ ಮೂಲಕ ಭಾರತವು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣಕಾಸು ಒದಗಿಸಲು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಸಹಾಯ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸುತ್ತಾ ಬಂದಿದೆ. ಅಮೆರಿಕದ ನಿರಂತರ ಒತ್ತಡ, ಸುಂಕ ಹೆಚ್ಚಳದ ಬೆದರಿಕೆ ಹೊರತಾಗಿಯೂ ರಷ್ಯಾದಿಂದ ಕಚ್ಚಾತೈಲ ಖರೀದಿಸುವುದನ್ನು ಭಾರತ ನಿಲ್ಲಿಸಿಲ್ಲ. ಅದಕ್ಕೆ ಪ್ರತೀಕಾರವಾಗಿ ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು ಶೇ 50ಕ್ಕೆ ಹೆಚ್ಚಿಸಿತ್ತು. ಇದರಿಂದ, ಉಭಯ ದೇಶಗಳ ನಡುವಣ ಸಂಬಂಧ ತೀವ್ರ ಹದಗೆಟ್ಟಿತ್ತು. ಸುಂಕ ಹೆಚ್ಚಿಸಿದ ಅಮೆರಿಕದ ಕ್ರಮವನ್ನು ಭಾರತ, ‘ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ’ ಎಂದು ಟೀಕಿಸಿತ್ತು.
ಏರ್‌ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ಸ್ಥಗಿತಗೊಳಿಸಲಿದೆ ಎನ್ನುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ’ ಎಂದೂ ಟ್ರಂಪ್ ಪುನರುಚ್ಚರಿಸಿದ್ದಾರೆ.
‘ಮಾರುಕಟ್ಟೆಯ ಬೇಡಿಕೆ ಆಧರಿಸಿ ವಿವಿಧ ಮೂಲಗಳಿಂದ ಇಂಧನ ಖರೀದಿಸಲು ಆದ್ಯತೆ ನೀಡಲಾಗುವುದು’ ಎಂಬ ಭಾರತದ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ‘ಭಾರತ ಅಂತಹ ಹೇಳಿಕೆಗಳನ್ನು ನೀಡಿದೆ ಎಂದು ನಾನು ನಂಬುವುದಿಲ್ಲ. ಮೋದಿ ಅವರೊಂದಿಗೆ ಮಾತನಾಡಿದೆ. ಅವರು ರಷ್ಯಾದೊಂದಿಗೆ ತೈಲ ಖರೀದಿಸುವ ವ್ಯವಹಾರವನ್ನು ಮಾಡುವುದಿಲ್ಲ ಎಂದು ಭರವಸೆ ನೀಡಿದರು’ ಎಂದು ತಿಳಿಸಿದ್ದಾರೆ.
ರಷ್ಯಾದಿಂದ ಕಚ್ಚಾ ತೈಲ ಖರೀದಿಯ ಮೂಲಕ ಭಾರತವು ರಷ್ಯಾಗೆ ಯುದ್ಧಕ್ಕೆ ಹಣಕಾಸು ಒದಗಿಸಲು ಸಹಾಯ ಮಾಡುತ್ತಿದೆ ಎಂದು ಅಮೆರಿಕ ಹೇಳುತ್ತಲೇ ಬಂದಿದೆ.
ಟ್ರಂಪ್ ಅವರು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 50ಕ್ಕೆ ಹೆಚ್ಚಿಸಿದ ನಂತರ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಹದಗೆಟ್ಟಿವೆ. ಇದರಲ್ಲಿ ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದಕ್ಕೆ ಶೇ 25ರಷ್ಟು ಹೆಚ್ಚುವರಿ ಸುಂಕವೂ ಸೇರಿದೆ.
‘ಭಾರತ ಮತ್ತು ಪಾಕಿಸ್ತಾನವು ಪರಮಾಣು ರಾಷ್ಟ್ರಗಳು. ಎರಡೂ ರಾಷ್ಟ್ರಗಳ ನಡುವಿನ ಯುದ್ಧದಲ್ಲಿ ಏಳು ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಇದನ್ನು ತಡೆಯದೇ ಇದ್ದಿದ್ದರೆ ಪರಮಾಣು ಯುದ್ಧ ಸಂಭವಿಸುವ ಸಾಧ್ಯತೆ ಇತ್ತು’ ಎಂದು ಹೇಳಿದ್ದಾರೆ. ಆದರೆ ಆ ಯುದ್ಧ ವಿಮಾನಗಳು ಯಾವ ರಾಷ್ಟ್ರಗಳಿಗೆ ಸೇರಿದವು ಎಂಬುದನ್ನು ಟ್ರಂಪ್ ಸ್ಪಷ್ಟಪಡಿಸಿಲ್ಲ.
2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿದ ಬಳಿಕ ಭಾರತವು ರಷ್ಯಾದಿಂದ ಖರೀದಿಸುವ ಕಚ್ಚಾತೈಲದ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.
2025ರ ಮೊದಲ ಒಂಬತ್ತು ತಿಂಗಳಲ್ಲಿ ರಷ್ಯಾದಿಂದ ಪ್ರತಿದಿನ 19 ಲಕ್ಷ ಬ್ಯಾರಲ್‌ನಷ್ಟು ತೈಲ ಖರೀದಿಸಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಹೇಳಿದೆ. ಆಂದರೆ, ಈ ಅವಧಿಯಲ್ಲಿ ರಷ್ಯಾದ ಒಟ್ಟು ರಫ್ತಿನ ಶೇ 40ರಷ್ಟು ತೈಲ ಭಾರತಕ್ಕೆ ಬಂದಿದೆ. ಉಕ್ರೇನ್ ಸೇನೆಯು ರಷ್ಯಾದ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿಯನ್ನು ಹೆಚ್ಚಿಸಿದೆ. ಇದರ ನಡುವೆಯೇ ಭಾರತದ ಮೇಲೆ ಅಮೆರಿಕದ ಒತ್ತಡ ಬಂದಿದೆ.
ದ್ವಿಪಕ್ಷೀಯ ಭೇಟಿ ಮೇಲೆ ಕರಿನೆರಳು...
ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ಆಸಿಯಾನ್) ಶೃಂಗಸಭೆ ಕ್ವಾಲಾಲಂಪುರದಲ್ಲಿ ಇದೇ 26ರಿಂದ 28ರವರೆಗೆ ನಿಗದಿಯಾಗಿದೆ. ಈ ಶೃಂಗದಲ್ಲಿ ಡೊನಾಲ್ಡ್ ಟ್ರಂಪ್ ಅವರೂ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ವೇಳೆ ಮೋದಿ ಮತ್ತು ಟ್ರಂಪ್ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ. ಆದರೆ, ಟ್ರಂಪ್ ಅವರು ಪದೇ ಪದೇ ಭಾರತ ವಿರೋಧಿ ಹೇಳಿಕೆ ನೀಡುತ್ತಿರುವುದು ದ್ವಿಪಕ್ಷೀಯ ಭೇಟಿ ಮೇಲೆ ಕರಿನೆರಳು ಬೀರಿದೆ. ‘ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂಬ ಭರವಸೆಯನ್ನು ಮೋದಿ ನೀಡಿದ್ದಾರೆ’ ಎಂದು ಟ್ರಂಪ್ ಈ ಹಿಂದೆ ಹೇಳಿದ್ದಾಗ ಕಾಂಗ್ರೆಸ್ ಒಳಗೊಂಡಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಟ್ರಂಪ್ ಅದೇ ಹೇಳಿಕೆ ಪುನರುಚ್ಚರಿಸಿರುವುರಿಂದ ಸರ್ಕಾರವನ್ನು ಟೀಕಿಸಲು ವಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.