ಅಮೆರಿಕದ ಶ್ವೇತ ಭವನದಲ್ಲಿ ನಡೆದ ಸಭೆಯಲ್ಲಿ ವೊಲೊಡಿಮಿರ್ ಝೆಲೆನ್‌ಸ್ಕಿ, ಡೊನಾಲ್ಡ್ ಟ್ರಂಪ್ ಹಾಗೂ ಜೆ.ಡಿ. ವ್ಯಾನ್ಸ್ ನಡುವೆ ನಡೆದ ಕಾವೇರಿದ ಚರ್ಚೆ
ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ನಡುವೆ ಶ್ವೇತಭವನದಲ್ಲಿ ನಡೆದ ಜಟಾಪಟಿಯಿಂದ ಆಡಳಿತಾರೂಢ ರಿಪಬ್ಲಿಕನ್ ಪಕ್ಷದಲ್ಲೇ ಭಿನ್ನ ಸ್ವರಗಳು ಕೇಳಿಬಂದಿವೆ. ಇದರಿಂದ ರಷ್ಯಾದೊಂದಿಗೆ ಕಾದಾಡುತ್ತಿರುವ ಉಕ್ರೇನ್‌ಗೆ ನೆರವು ಪೂರೈಕೆ ಮೇಲೆ ಕರಿಛಾಯೆ ಮೂಡಿದೆ ಎಂದೇ ವಿಶ್ಲೇಷಿಸಲಾಗಿದೆ.
ಟ್ರಂಪ್ ಮತ್ತು ಝೆಲೆನ್‌ಸ್ಕಿ ಅವರ ನಡುವೆ ಕಾವೇರಿದ ಚರ್ಚೆಯ ನಂತರ ರಿಪಬ್ಲಿಕನ್ ಪಕ್ಷದ ಕೆಲವರು ಉಕ್ರೇನ್ ನಾಯಕನ ವಿರುದ್ಧ ಹರಿಹಾಯ್ದಿದ್ದಾರೆ. ಮಾತುಕತೆಯ ನಡುವೆ ಎದ್ದುಹೋದ ಝೆಲೆನ್‌ಸ್ಕಿ ಅವರ ನಡೆಯನ್ನು ಟ್ರಂಪ್ ಮತ್ತು ಉಪಾದ್ಯಕ್ಷ ಜೆ.ಡಿ. ವ್ಯಾನ್ಸ್ ಖಂಡಿಸಿದ್ದು, ಅಗೌರವ ತೋರಿದ್ದರೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.
‘ಝೆಲೆನ್‌ಸ್ಕಿ ಅವರು ತಮ್ಮ ಹೇಳಿಕೆಯನ್ನು ಬದಲಿಸಿಕೊಳ್ಳಬೇಕು ಅಥವಾ ರಾಜೀನಾಮೆ ನೀಡಬೇಕು ಎಂದು ಸೆನೆಟರ್ ಲಿಂಡ್ಸಿ ಗ್ರಾಹಮ್ ಒತ್ತಾಯಿಸಿದ್ದಾರೆ.
‘ಓವಲ್ ಕಚೇರಿಯಲ್ಲಿ ಏನು ನಡೆದಿದೆಯೋ ಅದು ಅಗೌರವದ ಸನ್ನಿವೇಶ. ಈ ಘಟನೆಯಿಂದ ಭವಿಷ್ಯದಲ್ಲಿ ಝೆಲೆನ್‌ಸ್ಕಿ ಅವರೊಂದಿಗೆ ಅಮೆರಿಕ ವ್ಯವಹರಿಸುತ್ತದೋ ಇಲ್ಲವೋ ತಿಳಿಯದು’ ಎಂದಿದ್ದಾರೆ.
ಈ ಘಟನೆಯ ನಂತರ ಡೆಮಾಕ್ರೆಟಿಕ್ ಪಕ್ಷದ ಸದಸ್ಯರು ಉಕ್ರೇನ್ ಬೆಂಬಲಿಸಿದರೆ, ರಿಪಬ್ಲಿಕನ್ ಪಕ್ಷದ ಕೆಲವರು ಉಕ್ರೇನ್ ಅಧ್ಯಕ್ಷರನ್ನು ಬೆಂಬಲಿಸಿದ್ದಾರೆ. ಇದರಿಂದ ಆಡಳಿತಾರೂಢ ರಿಪಬ್ಲಿಕನ್ ಪಕ್ಷದವರಲ್ಲೇ ಭಿನ್ನ ಸ್ವರ ಕೇಳಿಬಂದಿದೆ.
‘ಅಮೆರಿಕದ ವಿದೇಶಾಂಗ ನೀತಿಯ ಕರಾಳದಿನವಿದು. ಉಕ್ರೇನ್ ಸ್ವಾತಂತ್ರ್ಯವನ್ನು ಬಯಸುತ್ತಿದೆ. ಮುಕ್ತ ಮಾರುಕಟ್ಟೆ ಮತ್ತು ಕಾನೂನು ಕೇಳುತ್ತಿದೆ. ಪಶ್ಚಿಮದೊಂದಿಗೆ ಇರಲು ಬಯಸುತ್ತಿದೆ. ಮತ್ತೊಂದೆಡೆ ರಷ್ಯಾ ನಮ್ಮನ್ನು ಮತ್ತು ಪಶ್ಚಿಮ ನಿಲುವನ್ನು ದ್ವೇಷಿಸುತ್ತಿದೆ. ನಮ್ಮ ನಿಲುವು ಸ್ವತಂತ್ರ ಬಯಸುವವರ ಕಡೆ ಇರಬೇಕು’ ಎಂದು ಡೆಮಾಕ್ರೆಟಿಕ್‌ನವರು ಹೇಳಿದ್ದಾರೆ.
ಹೇರಳವಾದ ಖನಿಜ ಸಂಪತ್ತು ಹೊಂದಿರುವ ತನ್ನ ರಾಷ್ಟ್ರದ ಸಂಪತ್ತನ್ನು ಅಮೆರಿಕ ಬಳಸಿಕೊಳ್ಳಲು ಅನುಮತಿಸುವ ಒಡಂಬಡಿಕೆಗೆ ಸಹಿ ಹಾಕುವ ಮಾತುಕತೆ ಸಭೆಯಲ್ಲಿ ಹಾಜರಾಗಲು ವಾಷಿಂಗ್ಟನ್‌ಗೆ ಝೆಲೆನ್‌ಸ್ಕಿ ಬಂದಿದ್ದರು. ಪಕ್ಕದ ಪುಟ್ಟ ರಾಷ್ಟ್ರದ ಮೇಲೆ ದಾಳಿ ನಡೆಸಿದ ವಿಷಯದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರ ವಹಿಸದಂತೆ ಅಮೆರಿಕದ ಬೆಂಬಲ ಪಡೆಯುವ ಯತ್ನವನ್ನು ಝೆಲೆನ್‌ಸ್ಕಿ ನಡೆಸಿದ್ದರು. ಆದರೆ, ಸಭೆಯ ನಡುವೆಯೇ ಎದ್ದುಹೋಗುವಂತೆ ಝೆಲೆನ್‌ಸ್ಕಿಗೆ ಹೇಳಲಾಯಿತು. ಇದರಿಂದ ಸಹಿ ಕಾಣದೆ ಒಡಂಬಡಿಕೆ ಹಾಗೇ ಉಳಿಯಿತು ಎಂದೆನ್ನಲಾಗಿದೆ.
ಮೂರು ವರ್ಷಗಳ ಹಿಂದೆ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ನಂತರ ಕಾಂಗ್ರೆಸ್ 175 ಶತಕೋಟಿ ಅಮೆರಿಕನ್ ಡಾಲರ್ ನೆರವನ್ನು ಉಕ್ರೇನ್‌ಗೆ ಮಂಜೂರು ಮಾಡಿದೆ. ಇದರ ಇತ್ತೀಚಿನ ಕಂತು ಕಳೆದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದೆ. ಆ ಸಂದರ್ಭದಲ್ಲಿ ಜೋ ಬೈಡನ್ ಅಮೆರಿಕದ ಅಧ್ಯಕ್ಷರಾಗಿದ್ದರು.
ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಉತ್ತಮವಾಗಬೇಕು ಎಂದು ರಿಪಬ್ಲಿಕನ್ ಪಕ್ಷದ ಹಲವರು ಇಂಗಿತ ವ್ಯಕ್ತಪಡಿಸಿದ್ದಾರೆ. ಝೆಲೆನ್‌ಸ್ಕಿ ಅವರು ಈ ಒಪ್ಪಂದಕ್ಕೆ ಸಹಿ ಹಾಕಬೇಕು. ಆ ಮೂಲಕ ಎರಡೂ ರಾಷ್ಟ್ರಗಳು ಪರಸ್ಪರ ಹಿತ ಕಾದಂತೆ ಆಗಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.