ADVERTISEMENT

ನೋ ಕಿಂಗ್ಸ್ ಪ್ರೊಟೆಸ್ಟ್‌ಗೆ ವಿರೋಧ: ಪ್ರತಿಭಟನಕಾರರ ಮೇಲೆ ಕೆಸರು ಎರಚಿದ ಟ್ರಂಪ್!

ಏಜೆನ್ಸೀಸ್
Published 19 ಅಕ್ಟೋಬರ್ 2025, 6:53 IST
Last Updated 19 ಅಕ್ಟೋಬರ್ 2025, 6:53 IST
   

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಿರುದ್ಧದ ‘ನೋ ಕಿಂಗ್ಸ್’ (ಯಾರು ರಾಜರಲ್ಲ) ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪ್ರತಿಭಟನಕಾರರನ್ನು ಉದ್ದೇಶಿಸಿ ತಯಾರಿಸಲಾದ 19 ಸೆಕೆಂಡುಗಳ ಎಐ ವಿಡಿಯೊವವನ್ನು ಟ್ರಂಪ್‌ ಅವರು ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ‘ಟ್ರುತ್ ಸೋಷಿಯಲ್‌’ನಲ್ಲಿ ಹಂಚಿಕೊಂಡಿದ್ದಾರೆ.

ಟ್ರಂಪ್ ಅವರು ‘ಕಿಂಗ್ ಟ್ರಂಪ್’ ಎಂದು ಬರೆಯಲಾದ ಫೈಟರ್ ಜೆಟ್ ಅನ್ನು ಚಲಾಯಿಸುವ ಮೂಲಕ ಟೈಮ್ಸ್ ಸ್ಕ್ವೇರ್‌ನಂತೆ ಕಾಣುವ ಸ್ಥಳದಲ್ಲಿ ‘ನೋ ಕಿಂಗ್ಸ್’ (ಯಾರು ರಾಜರಲ್ಲ) ಪ್ರತಿಭಟನಕಾರರ ಮತ್ತು ಅಮೇರಿಕದ ಸಾಮಾಜಿಕ ಮಾಧ್ಯಮ ಪ್ರಭಾವಿ ಹ್ಯಾರಿ ಸಿಸ್ಸನ್ ಅವರ ಮೇಲೆ ಕೆಸರು ಎರಚುತ್ತಿರುವ ದೃಶ್ಯ ಎಐ ವಿಡಿಯೊದಲ್ಲಿ ಸೆರೆಯಾಗಿದೆ.

ADVERTISEMENT

ಡೊನಾಲ್ಡ್ ಟ್ರಂಪ್ ಅವರ ಆಡಳಿತ ಮತ್ತು ನೀತಿಗಳನ್ನು ವಿರೋಧಿಸಿ ನಡೆಸಲಾದ ‘ನೋ ಕಿಂಗ್ಸ್’ ಪ್ರತಿಭಟನೆಯಲ್ಲಿ ಸುಮಾರು ಏಳು ಮಿಲಿಯನ್ (ಅಂದಾಜು 70 ಲಕ್ಷ) ಪ್ರತಿಭಟನಕಾರರು ಭಾಗವಹಿಸಿದ್ದರು ಎಂದು ಆಯೋಜಕರನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.

ಈ ಬಾರಿಯ ಪ್ರತಿಭಟನೆಗಳಲ್ಲಿ ಅಮೆರಿಕದಾದ್ಯಂತ 2,700ಕ್ಕೂ ಹೆಚ್ಚು ನಗರಗಳಿಂದ ಶಿಕ್ಷಕರು, ವಕೀಲರು, ವಿದ್ಯಾರ್ಥಿಗಳು, ಮಾಜಿ ಯೋಧರು ಮತ್ತು ವಜಾಗೊಳಿಸಲಾದ ಸರ್ಕಾರಿ ನೌಕರರು ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ. ಶಾಂತಿಯುತ ರೀತಿಯಲ್ಲಿ ಪ್ರತಿಭಟನೆಗಳು ನಡೆದಿದ್ದು, ಯಾವುದೇ ಅಹಿತಕರ ಘಟನೆಗಳು ಅಥವಾ ಬಂಧನ ಕುರಿತು ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಂಪ್ ವಿರುದ್ಧ ಹೆಚ್ಚುತ್ತಿರುವ ವಿರೋಧದ ಹೊರತಾಗಿಯೂ, ಭಾನುವಾರ ಶ್ವೇತಭವನವು ‘ಎಕ್ಸ್‌’ನಲ್ಲಿ ಅಮೆರಿಕ ಅಧ್ಯಕ್ಷರು ಚಕ್ರವರ್ತಿಯ ಕಿರೀಟವನ್ನು ಧರಿಸಿರುವ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದೆ.

ಡೆಮಾಕ್ರಟಿಕ್ ನಾಯಕರು ಹೆಚ್ಚಾಗಿ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ರಿಪಬ್ಲಿಕನ್ ನಾಯಕರು, ಡೆಮಾಕ್ರಟಿಕ್ ನಾಯಕರದ್ದು ಅಮೆರಿಕ ವಿರೋಧಿ ನಡೆ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.