
ಚಿತ್ರ ಕೃಪೆ: ಎಕ್ಸ್
ಇಸಾಬೆಲಾ: ಉತ್ತರ ಫಿಲಿಪ್ಪೀನ್ಸ್ ತೀರಕ್ಕೆ ಭಾನುವಾರ ರಾತ್ರಿ ‘ಫಂಗ್–ವಾಂಗ್’ ಚಂಡಮಾರುತ ಅಪ್ಪಳಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಭೂಕುಸಿತದ ಭೀತಿಯಿಂದ 10 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಚಂಡಮಾರುತದ ಪ್ರಭಾವಕ್ಕೆ ಸಿಕ್ಕಿ ಹಲವಾರು ಪ್ರದೇಶಗಳಲ್ಲಿ ಅಪಾರ ಹಾನಿಯಾಗಿದೆ. ಭಾರಿ ಮಳೆಗೆ ರಸ್ತೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ನದಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಕುಸಿದು ಬಿದ್ದ ಮನೆಯೊಂದರ ಅವಶೇಷಗಳಡಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಟೆಗೆ 185 ಕಿ.ಮೀ ವೇಗ ಪಡೆದುಕೊಂಡಿರುವ ಚಂಡಮಾರುತ, ಲುಜೋನ್ ದ್ವೀಪಕ್ಕೂ ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಬಿಕೋಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಹಲವು ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಫಿಲಿಪ್ಪೀನ್ಸ್‌ನಲ್ಲಿ ಈ ಚಂಡಮಾರುತವನ್ನು ‘ಉವಾನ್’ ಎಂದು ಕರೆಯಲಾಗಿದೆ.
ಮೂರ್ನಾಲ್ಕು ದಿನಗಳ ಹಿಂದೆ ಅಪ್ಪಳಿಸಿದ್ದ ‘ಕಲ್ಮೇಗಿ’ ಚಂಡಮಾರುತಕ್ಕೆ ಫಿಲಿಪ್ಪೀನ್ಸ್‌ನಲ್ಲಿ ಸುಮಾರು 200 ಮಂದಿ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.