
ಡಮಾಸ್ಕಸ್: ಉಗ್ರ ಸಂಘಟನೆ ‘ಇಸ್ಲಾಮಿಕ್ ಸ್ಟೇಟ್ ಗ್ರೂಪ್’ (ಐಎಸ್) ಮಧ್ಯ ಸಿರಿಯಾದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಅಡಗಿಸಿಟ್ಟಿತ್ತು ಎನ್ನಲಾದ ಸ್ಥಳದ ಮೇಲೆ ಬ್ರಿಟನ್ ಹಾಗೂ ಫ್ರಾನ್ಸ್‌ನ ಯುದ್ಧವಿಮಾನಗಳು ವೈಮಾನಿಕ ದಾಳಿ ನಡೆಸಿವೆ ಎಂದು ಬ್ರಿಟಿಷ್ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.
ಸಿರಿಯಾದ ಹೋಮ್ಸ್ ಪ್ರಾಂತ್ಯದ ಪಾಲ್ಮಿರಾ ಎಂಬಲ್ಲಿ ಶನಿವಾರ ಸಂಜೆ ದಾಳಿ ನಡೆದಿದೆ ಎಂದು ಅದು ಹೇಳಿದೆ.
ಬ್ರಿಟನ್ ಮತ್ತು ಫ್ರಾನ್ಸ್, ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಐಎಸ್ ವಿರುದ್ಧ ಹೋರಾಡುತ್ತಿರುವ ಅಮೆರಿಕ ನೇತೃತ್ವದ ಒಕ್ಕೂಟದ ಭಾಗವಾಗಿವೆ. ದಾಳಿ ಕುರಿತು ಸಿರಿಯಾ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ಒಂದು ವರ್ಷದಿಂದ ಅದು ಒಕ್ಕೂಟವನ್ನು ಸೇರಿಕೊಂಡಿದೆ.
‘ಈ ಕ್ರಮವು ಬ್ರಿಟನ್‌ನ ನಾಯಕತ್ವ, ಮಧ್ಯ ಪ್ರಾಚ್ಯದಲ್ಲಿ ಐಎಸ್ ಹಾಗೂ ಅದರ ಹಿಂಸಾತ್ಮಕ ಸಿದ್ಧಾಂತಗಳನ್ನು ಸಂಪೂರ್ಣವಾಗಿ ಕಿತ್ತು ಹಾಕಲು ನಮ್ಮ ಮಿತ್ರರಾಷ್ಟ್ರಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಬದ್ಧತೆಯನ್ನು ತೋರಿಸುತ್ತದೆ’ ಎಂದು ರಕ್ಷಣಾ ಕಾರ್ಯದರ್ಶಿ ಜಾನ್ ಅವರು ಹೇಳಿದರು.
2019ರಲ್ಲಿ ಸಿರಿಯಾದಲ್ಲಿ ಐಎಸ್ ಸೋಲನುಭವಿಸಿದರೂ ಅದರ ‘ಸ್ಲೀಪರ್ ಸೆಲ್’ಗಳು ಸಿರಿಯಾ ಹಾಗೂ ಇರಾಕ್‌ನಲ್ಲಿ ಮಾರಕ ದಾಳಿಗಳನ್ನು ನಡೆಸುತ್ತಿವೆ. ಈ ಎರಡೂ ದೇಶಗಳಲ್ಲಿ ಐಎಸ್‌ನ 5ರಿಂದ 7 ಸಾವಿರ ಸದಸ್ಯರು ಇದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಕಳೆದ ತಿಂಗಳು ಅಮೆರಿಕ ಸೇನೆಯು ಸಿರಿಯಾದಲ್ಲಿರುವ ಐಎಸ್ ಉಗ್ರರು ಹಾಗೂ ಅವರು ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟ ಜಾಗಗಳ ಮೇಲೆ ದಾಳಿ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.