ADVERTISEMENT

ರಷ್ಯಾದ ಮೇಲೆ ತೀವ್ರ ಆರ್ಥಿಕ ದಿಗ್ಬಂಧನ ಹೇರುತ್ತೇವೆ: ಬ್ರಿಟನ್‌ ಪ್ರಧಾನಿ ಜಾನ್ಸನ್

ರಾಯಿಟರ್ಸ್
Published 22 ಫೆಬ್ರುವರಿ 2022, 11:38 IST
Last Updated 22 ಫೆಬ್ರುವರಿ 2022, 11:38 IST
ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌
ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌   

ಲಂಡನ್‌: ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿಗಳ ವಶದಲ್ಲಿರುವ ಎರಡು ಪ್ರದೇಶಗಳಿಗೆ ಯುದ್ಧ ಸನ್ನದ್ಧತೆಗೆ ಪುಟಿನ್‌ ಆದೇಶ ನೀಡಿದ ಕೂಡಲೇ ನಾವು ರಷ್ಯಾದ ಮೇಲೆ ತೀವ್ರ ಆರ್ಥಿಕ ದಿಗ್ಬಂಧನ ಹೇರುತ್ತೇವೆ ಎಂದು ಬ್ರಿಟನ್‌ನ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ.

ಉಕ್ರೇನ್‌ನಲ್ಲಿ ತಮ್ಮ ವಶದಲ್ಲಿರುವ ಪ್ರದೇಶಗಳನ್ನು ಸ್ವತಂತ್ರ ಎಂದು ಪರಿಗಣಿಸುವಂತೆ ಸೋಮವಾರ ಇಬ್ಬರು ಬಂಡುಕೋರ ನಾಯಕರು ರಷ್ಯಾಕ್ಕೆ ಮನವಿ ಮಾಡಿದ್ದರು. ಅದನ್ನು ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯಲ್ಲಿ ಪುಟಿನ್‌ ಕೂಡ ಅನುಮೋದಿಸಿದ್ದರು.

‘ನಿರ್ಬಂಧಗಳು, ಕೇವಲ ಡಾನ್‌ಬಾಸ್ ಮತ್ತು ಲುಹಾನ್‌ಸ್ಕ್‌ ಮತ್ತು ಡೊನೆಟ್‌ಸ್ಕ್‌ಗೆ (ಪ್ರತ್ಯೇಕತಾವಾದಿಗಳ ವಶದಲ್ಲಿರು ಪ್ರದೇಶಗಳು) ಮಾತ್ರ ಸೀಮಿತವಾಗಿರುವುದಿಲ್ಲ. ಆದರೆ ಇಡೀ ರಷ್ಯಾದ ಆರ್ಥಿಕ ಹಿತಾಸಕ್ತಿಗಳನ್ನು ಎಷ್ಟು ಸಾಧ್ಯವೋ ಅಷ್ಟು ಗುರಿಯಾಗಿರಿಸಿಕೊಂಡು ನಾವು ನಿರ್ಬಂಧಗಳನ್ನು ವಿಧಿಸುತ್ತೇವೆ’ ಎಂದು ಅವರು ಗುಡುಗಿದ್ದಾರೆ.

ADVERTISEMENT

ಒಂದು ವೇಳೆ ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದ್ದೇ ಆದರೆ, ಅದು ಪ್ರಮಾಧಕಾರಿ ಲೆಕ್ಕಾಚಾರವೆಂದು ಪುಟಿನ್‌ ಮುಂದೆ ಅರಿಯಲಿದ್ದಾರೆ ಎಂದು ಜಾನ್ಸನ್‌ ಹೇಳಿದರು. ಅಲ್ಲದೆ, ರಷ್ಯಾ ಪೂರ್ಣ ಪ್ರಮಾಣದ ಆಕ್ರಮಣಕ್ಕೆ ಸಜ್ಜಾಗಿದೆ ಎಂದೂ ಅವರು ತಿಳಿಸಿದರು.

ಜಾನ್ಸನ್ ಮಂಗಳವಾರ ಮುಂಜಾನೆ ಬ್ರಿಟನ್‌ನ ರಾಷ್ಟ್ರೀಯ ತುರ್ತು ಭದ್ರತಾ ಸಮಿತಿಯ ಸಭೆ ನಡೆಸಿದರು.

‘ಉಕ್ರೇನ್‌ ಸರಿಯಾದ ದೇಶವಲ್ಲ ಎಂದು ಪ್ರತಿಪಾದಿಸುವವೇ ಪುಟಿನ್ ಅವರ ಸುತ್ತಲೂ ನೆರೆದಿದ್ದಾರೆ. ಇದು ಸನ್ನಿವೇಶದ ದುರಂತ. ತಮ್ಮಿಂದ ಪ್ರಮಾದಕಾರಿ ಲೆಕ್ಕಾಚಾರವಾಯಿತೆಂದು ಪುಟಿನ್‌ಗೆ ಗೊತ್ತಾಗಲಿದೆ ಎಂಬುದು ನಮ್ಮ ಭಾವನೆ’ ಎಂದು ಜಾನ್ಸನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.