ADVERTISEMENT

ಸಂಪೂರ್ಣ ಕೀವ್ ಪ್ರದೇಶದ ನಿಯಂತ್ರಣವನ್ನು ಮರಳಿ ಪಡೆಯಲಾಗಿದೆ: ಉಕ್ರೇನ್

ಏಜೆನ್ಸೀಸ್
Published 3 ಏಪ್ರಿಲ್ 2022, 4:33 IST
Last Updated 3 ಏಪ್ರಿಲ್ 2022, 4:33 IST
ಉಕ್ರೇನ್‌ನ ಕೀವ್ ನಗರದಲ್ಲಿ ರಕ್ಷಣಾ ಕಾರ್ಯಾಚರಣೆ (ಪ್ರಾತಿನಿಧಿಕ ಚಿತ್ರ)
ಉಕ್ರೇನ್‌ನ ಕೀವ್ ನಗರದಲ್ಲಿ ರಕ್ಷಣಾ ಕಾರ್ಯಾಚರಣೆ (ಪ್ರಾತಿನಿಧಿಕ ಚಿತ್ರ)   

ಕೀವ್: ಯುದ್ಧ ಕೊನೆಗೊಳಿಸುವ ಉದ್ದೇಶದಿಂದ ಉಕ್ರೇನ್ ರಾಜಧಾನಿ ಸಮೀಪದ ಕೆಲವು ಪ್ರಮುಖ ಪಟ್ಟಣಗಳಿಂದ ರಷ್ಯಾ ಪಡೆಗಳು ಸೇನಾ ಕಾರ್ಯಾಚರಣೆಯನ್ನು ಕಡಿತಗೊಳಿಸಿದ ಬಳಿಕ, ಉಕ್ರೇನ್ 'ಇಡೀ ಕೀವ್ ಪ್ರದೇಶದ' ನಿಯಂತ್ರಣವನ್ನು ಮರಳಿ ಪಡೆದುಕೊಂಡಿದೆ ಎಂದು ಉಪ ರಕ್ಷಣಾ ಸಚಿವ ಗನ್ನಾ ಮಲಿಯಾರ್ ಶನಿವಾರ ತಿಳಿಸಿದ್ದಾರೆ.

'ರಷ್ಯಾದ ದಾಳಿಯಿಂದಾಗಿ ಹೆಚ್ಚು ಹಾನಿಗೊಳಗಾಗಿದ್ದ ಪಟ್ಟಣಗಳಾದ ಇರ್ಪಿನ್, ಬುಚಾ, ಗೊಸ್ಟೊಮೆಲ್ ಮತ್ತು ಇಡೀ ಕೀವ್ ಪ್ರದೇಶವು ಆಕ್ರಮಣಕಾರರಿಂದ ಮುಕ್ತವಾಗಿದೆ' ಎಂದು ಮಾಲಿಯಾರ್ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಈ ಎಲ್ಲಾ ಮೂರು ಪಟ್ಟಣಗಳು ಕೀವ್‌ನ ವಾಯುವ್ಯ ಭಾಗದದಲ್ಲಿದೆ. ರಷ್ಯಾ ಪಡೆಗಳು ಉಕ್ರೇನ್ ಅನ್ನು ಆಕ್ರಮಿಸಿದಾಗಿನಿಂದ ಭಾರಿ ಹಾನಿಗೊಳಗಾಗಿವೆ. ಇರ್ಪಿನ್ ಮತ್ತು ಬುಚಾ ಪಟ್ಟಣವನ್ನು ಈ ವಾರ ಉಕ್ರೇನ್ ಸೇನೆ ಹಿಂಪಡೆದಿದೆ.

ADVERTISEMENT

ರಷ್ಯಾ ಪಡೆಗಳು ಉಕ್ರೇನ್ ಮೇಲೆ ದಾಳಿ ನಡೆಸಿದಾಗಿನಿಂದ ಉಭಯ ದೇಶಗಳ ಯೋಧರು, ನಾಗರಿಕರು ಸೇರಿದಂತೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಬುಚಾದ ಬೀದಿಯೊಂದರಲ್ಲೇ ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ. ಪಟ್ಟಣದಲ್ಲಿ 280 ಜನರನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ ಮಾಡಲಾಗಿದೆ ಮತ್ತು ಪಟ್ಟಣವು ಶವಗಳಿಂದ ತುಂಬಿದೆ ಎಂದು ಮೇಯರ್ ಹೇಳಿರುವುದಾಗಿ ಸುದ್ದಿಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಫೆಬ್ರುವರಿ ಅಂತ್ಯದಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸಿದ ಬಳಿಕ ಇರ್ಪಿನ್‌ನಲ್ಲಿ ಕನಿಷ್ಠ 200 ಜನರು ಮೃತಪಟ್ಟಿದ್ದಾರೆ. ಇರ್ಪಿನ್ ಪಟ್ಟಣವನ್ನು ಉಕ್ರೇನ್ ಪಡೆಗಳು ಹಿಂಪಡೆದ ನಂತರ 643 ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೀವ್ ಬಳಿಯ ಗೊಸ್ಟೊಮೆಲ್ ವಾಯುನೆಲೆಯ ಮೇಲೆ ಹಿಡಿತ ಸಾಧಿಸಲು ಭಾರಿ ಹೋರಾಟ ನಡೆದಿತ್ತು. ಉಕ್ರೇನ್ ಉತ್ತರ ಭಾಗದಿಂದ ರಷ್ಯಾ ಪಡೆಗಳು ಹಿಂದೆ ಸರಿಯುತ್ತಿವೆ ಮತ್ತು ಉಕ್ರೇನ್‌ನ ಪೂರ್ವ ಮತ್ತು ದಕ್ಷಿಣ ಭಾಗದ ಮೇಲೆ ಕೇಂದ್ರೀಕರಿಸುತ್ತಿವೆ ಎಂದು ಉಕ್ರೇನ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.