(ಚಿತ್ರ ಕೃಪೆ: X/@banojyotsna)
ನ್ಯೂಯಾರ್ಕ್: ‘ಆತ್ಮೀಯ ಉಮರ್, ‘ಕಹಿತನವು’ ವ್ಯಕ್ತಿಯೊಬ್ಬನ ಅಂತರಾತ್ಮವನ್ನು ಆವರಿಸಿಕೊಳ್ಳದಂತೆ ನೋಡಿಕೊಳ್ಳುವ ಕುರಿತು ನೀವು ಆಡಿದ ಮಾತುಗಳನ್ನು ನಾನು ಪದೇ ಪದೇ ನೆನಪಿಸಿಕೊಳ್ಳುತ್ತೇನೆ. ನಿಮ್ಮ ಪೋಷಕರನ್ನು ಭೇಟಿಯಾದಾಗ ಬಹಳ ಸಂತೋಷವಾಯಿತು. ನಾವೆಲ್ಲರೂ ನಿಮ್ಮ ಬಗ್ಗೆಯೇ ಯೋಚಿಸುತ್ತಿದ್ದೇವೆ’
ದೆಹಲಿಯಲ್ಲಿ 2020ರ ಫೆಬ್ರುವರಿಯಲ್ಲಿ ನಡೆದಿದ್ದ ಗಲಭೆಗೆ ಪಿತೂರಿ ನಡೆಸಿದ ಆರೋಪದಡಿ ಬಂಧಿತರಾಗಿ ಜೈಲಿನಲ್ಲಿರುವ, ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರಿಗೆ ನ್ಯೂಯಾರ್ಕ್‌ನ 112ನೇ ಮೇಯರ್, ಭಾರತ ಸಂಜಾತ ಜೊಹ್ರಾನ್ ಮಮ್ದಾನಿ ಅವರು ಬರೆದಿರುವ ಪತ್ರದ ಸಾರಾಂಶ ಇದು.
ಮಮ್ದಾನಿ ಅವರ ಸಹಿ ಇರುವ ಪತ್ರವನ್ನು ಉಮರ್ ಖಾಲಿದ್ ಅವರ ಸಂಗಾತಿ ಬನೊಜ್ಯೋತ್ಸ್ನಾ ಲಾಹಿರಿ ಅವರು ‘ಜೈಲು ಪ್ರತ್ಯೇಕಿಸಲು ಪ್ರಯತ್ನಿಸಿದಾಗ ಪದಗಳ ಪಯಣ’ ಎಂಬ ಒಕ್ಕಣೆಯೊಂದಿಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉಮರ್ ಅವರ ಪೋಷಕರು ಕಳೆದ ತಿಂಗಳು ನ್ಯೂಯಾರ್ಕ್‌ನಲ್ಲಿ ಮಮ್ದಾನಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅವರು ಪತ್ರವನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ಸಂಸದರಿಂದ ಮನವಿ:
ಖಾಲಿದ್‌ಗೆ ಜಾಮೀನು ನೀಡುವಂತೆ ಒತ್ತಾಯಿಸಿ ಹಾಗೂ ನ್ಯಾಯೋಚಿತ, ಸಕಾಲಿಕ ವಿಚಾರಣೆ ನಡೆಸುವಂತೆ ಆಗ್ರಹಿಸಿ ಅಮೆರಿಕದ ಸಂಸದರ ತಂಡವು, ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಕ್ವಾತ್ರಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸಲಾಗಿರುವ ಉಮರ್ ಖಾಲಿದ್ ಅವರು ಐದು ವರ್ಷಗಳಿಂದ ಜಾಮೀನು ಸಿಗದೆ ಜೈಲಿನಲ್ಲಿದ್ದಾರೆ. ಅವರ ವಿಚಾರಣೆಯನ್ನು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ನಡೆಸುವಂತೆ ಮನವಿ ಮಾಡಿದೆ.
ಖಾಲಿದ್ ಸೇರಿದಂತೆ ದೆಹಲಿ ಗಲಭೆ ಪ್ರಕರಣದ ಇತರೆ ಆರೋಪಿಗಳ ದೀರ್ಘಾವಧಿ ವಿಚಾರಣೆ ಪೂರ್ವ ಬಂಧನದ ಕುರಿತು ಜಿಮ್ ಮೆಕ್‌ಗವರ್ನ್ ಮತ್ತು ಜೇಮಿ ರಾಸ್ಕಿನ್ ಅವರ ನೇತೃತ್ವದ ಅಮೆರಿಕದ ಎಂಟು ಸಂಸದರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ಮೌಲ್ಯದ ತಳಹದಿಯಲ್ಲಿ ಭಾರತ ಮತ್ತು ಅಮೆರಿಕವು ದೀರ್ಘಾವಧಿಯ ಸಂಬಂಧವನ್ನು ಹೊಂದಿದೆ. ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ಎರಡೂ ದೇಶಗಳು ಬಹುತ್ವ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವಹಕ್ಕುಗಳನ್ನು ಎತ್ತಿ ಹಿಡಿಯುತ್ತದೆ. ಖಾಲಿದ್ ಬಂಧನ, ವಿಚಾರಣೆ, ಬಿಡುಗಡೆ ವಿಷಯವನ್ನೂ ಈ ಹಿನ್ನೆಲೆಯಲ್ಲಿ ಪರಿಗಣಿಸಬೇಕು’ ಎಂದು ಸಂಸದರು ಮನವಿ ಮಾಡಿದ್ದಾರೆ.
ಖಾಲಿದ್ ಅವರಿಗೆ ತಮ್ಮ ಸಹೋದರಿಯ ವಿವಾಹದಲ್ಲಿ ಪಾಲ್ಗೊಳ್ಳಲು ಅನುಮತಿಸಿ, ಸುಪ್ರೀಂಕೋರ್ಟ್ ತಾತ್ಕಾಲಿಕ ಜಾಮೀನು ನೀಡಿರುವುದನ್ನು ನಿಯೋಗವು ಸ್ವಾಗತಿಸಿದೆ.
‘ಕಾರ್ಮಿಕರ ಬದುಕಿನಲ್ಲಿ ಬದಲಾವಣೆ’
ನ್ಯೂಯಾರ್ಕ್: ‘ಆಡಳಿತ ಪರಿವರ್ತನೆ ಮೂಲಕ ವಲಸಿಗರು ಮತ್ತು ಕಾರ್ಮಿಕರ ಬದುಕಿನಲ್ಲಿ ಗಮನಾರ್ಹ ಬದಲಾವಣೆ ತರುವ ಭರವಸೆಯನ್ನು ನ್ಯೂಯಾರ್ಕ್‌ನ ಮೇಯರ್ ಮಮ್ದಾನಿ ವಾಗ್ದಾನ ಮಾಡಿದ್ದಾರೆ. ಬುಧವಾರ ಮಧ್ಯರಾತ್ರಿ ನ್ಯೂಯಾರ್ಕ್‌ನ ಓಲ್ಡ್ ಸಿಟಿ ಹಾಲ್ ಸಬ್‌ವೇ ಸ್ಟೇಷನ್‌ನಲ್ಲಿ ನಡೆದ ಪ್ರಮಾಣ ವಚನ ಸಮಾರಂಭದ ಬಳಿಕ ಅವರು ಮಾತನಾಡಿದರು.
’ಕೆಲವರು ಪಟ್ಟು ಹಿಡಿದು ಹೇಳುತ್ತಿದ್ದ ‘ನ್ಯೂಯಾರ್ಕ್‌ನ ದೊಡ್ಡ ಸರ್ಕಾರ’ದ ಯುಗ ಅಂತ್ಯಗೊಂಡಿದೆ. ಇಂದಿನಿಂದ ನಾವು ವಿಶಾಲ ದೃಷ್ಟಿಕೋನ ಮತ್ತು ಧೈರ್ಯದಿಂದ ಆಡಳಿತ ಆರಂಭಿಸುತ್ತಿದ್ದೇವೆ. ಪ್ರತಿ ಹಂತದಲ್ಲೂ ನಮಗೆ ಯಶಸ್ಸು ಸಿಗಬೇಕೆಂದಿಲ್ಲ ಆದರೆ ಗೆಲುವಿಗಾಗಿ ನಾವು ಪ್ರಯತ್ನಿಸಿಯೇ ಇಲ್ಲ ಎಂಬ ಆರೋಪ ಎಂದಿಗೂ ನಮ್ಮ ಮೇಲೆ ಬಾರದಂತೆ ನೋಡಿಕೊಳ್ಳುತ್ತೇವೆ. ‘ಪ್ರಜಾಪ್ರಭುತ್ವ ಸಮಾಜವಾದಿ’ಯಾಗಿಯೇ ಆಡಳಿತ ನಡೆಸುತ್ತೇನೆ’ ಎಂದು ಮಮ್ದಾನಿ ಹೇಳಿದರು.
ಅಮೆರಿಕದ ನಟ ಮ್ಯಾಂಡಿ ಪ್ಯಾಟಿಂಕಿನ್ ಅವರು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಗಾಯನ ತಂಡದ ಜತೆಗೆ ಪ್ರಸ್ತುತಪಡಿಸಿದ ‘ಓವರ್ ದಿ ರೇನ್‌ಬೊ’ ಗೀತೆಯು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮೆರುಗು ತುಂಬಿತು.
‘ಜೈಲು ಡೈರಿ’ ಓದಿದ್ದ ಮಮ್ದಾನಿ
2023ರಲ್ಲಿ ಶ್ವೇತಭವನಕ್ಕೆ ನರೇಂದ್ರ ಮೋದಿ ಅವರು ಭೇಟಿ ನೀಡುವ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ‘ಹೌಡಿ ಡೆಮಾಕ್ರಸಿ’ ಕಾರ್ಯಕ್ರಮದಲ್ಲಿ ಜೊಹ್ರಾನ್ ಮಮ್ದಾನಿ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಖಂಡರಾಗಿದ್ದ ಉಮರ್ ಖಾಲಿದ್ ಅವರ ಪತ್ರ ‘ಜೈಲು ಡೈರಿ’ಯನ್ನು ಓದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.