ADVERTISEMENT

ಅಮೆರಿಕ: ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆ ತುರ್ತು ಬಳಕೆಗೆ ಅನುಮತಿ

ಏಜೆನ್ಸೀಸ್
Published 28 ಫೆಬ್ರುವರಿ 2021, 2:27 IST
Last Updated 28 ಫೆಬ್ರುವರಿ 2021, 2:27 IST
ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆ-ಸಾಂದರ್ಭಿಕ ಚಿತ್ರ
ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆ-ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಅಮೆರಿಕದಲ್ಲಿ ಕೋವಿಡ್‌–19 ಹೋರಾಟಕ್ಕೆ ಮತ್ತೊಂದು ಲಸಿಕೆಯ ಬಲ ದೊರೆತಿದೆ. ತುರ್ತು ಸಂದರ್ಭದ ಬಳಕೆಗಾಗಿ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆಗೆ ಅನುಮತಿ ನೀಡಲಾಗಿದೆ.

ಕೊರೊನಾ ವೈರಸ್‌ ಸಾಂಕ್ರಾಮಿಕದಿಂದ ಅಮೆರಿಕದಲ್ಲಿ 5,00,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 'ಹೊಸ ಸ್ವರೂಪದ ಕೊರೊನಾ ವೈರಸ್‌ ಸೇರಿದಂತೆ ಕೋವಿಡ್‌–19 ನಿಯಂತ್ರಣದಲ್ಲಿ ಲಸಿಕೆಯ ಬಳಕೆ ಪರಿಣಾಮಕಾರಿಯಾಗಲಿದೆ' ಎಂದು ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಎಫ್‌ಡಿಎ ಹೇಳಿದೆ.

ಅಮೆರಿಕದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಅನುಮತಿ ದೊರೆತಿರುವ ಮೂರನೇ ಲಸಿಕೆ ಇದಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಫೈಝರ್‌ ಮತ್ತು ಮಾಡರ್ನಾ ಲಸಿಕೆಗಳಿಗೆ ಅನುಮತಿ ನೀಡಲಾಗಿತ್ತು.

ADVERTISEMENT

ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಈ ಲಸಿಕೆಯ ಒಂದು ಡೋಸ್‌ ಹಾಕಿಸಿಕೊಂಡರೆ ಸಾಕಾಗುತ್ತದೆ. ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಲಸಿಕೆಯನ್ನು ಸಾಮಾನ್ಯ ಫ್ರಿಡ್ಜ್‌ ಉಷ್ಣಾಂಶದಲ್ಲಿ ಸಂಗ್ರಹಿಸಿ ಇಡಬಹುದಾಗಿದೆ, ಇದರಿಂದಾಗಿ ಸಾಗಣೆ ಮತ್ತು ಸಂಗ್ರಹ ಸರಳವಾಗಲಿದೆ. ಈವರೆಗೂ ಅಮೆರಿಕದಲ್ಲಿ 6.5 ಕೋಟಿ ಜನರು ಫೈಝರ್‌ ಮತ್ತು ಮಾಡರ್ನಾ ಲಸಿಕೆ ಡೋಸ್‌ ಹಾಕಿಸಿಕೊಂಡಿದ್ದಾರೆ. ಆ ಎರಡೂ ಲಸಿಕೆಗಳೂ ಸುಮಾರು ಶೇ 95ರಷ್ಟು ಪರಿಣಾಮಕಾರಿಯಾಗಿದೆ ಎಂದು ವರದಿಯಾಗಿದೆ.

'ಎಲ್ಲ ಅಮೆರಿಕನ್ನರಿಗೂ ಇದು ಒಳ್ಳೆಯ ಸುದ್ದಿಯಾಗಿದೆ, ಬಿಕ್ಕಟ್ಟು ಶಮನಗೊಳಿಸುವ ಪ್ರಯತ್ನದಲ್ಲಿ ಇದು ಪ್ರೋತ್ಸಾಹದಾಯಕ ಬೆಳವಣಿಗೆಯಾಗಿದೆ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ, ಹೊಸ ಸ್ವರೂಪದ ವೈರಸ್‌ನ ಅಪಾಯ ಇರುವುದರಿಂದ ಸೋಂಕು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರದಂತಹ ಕ್ರಮಗಳನ್ನು ಅನುಸರಿಸುವಂತೆ ಬೈಡನ್‌ ಆಗ್ರಹಿಸಿದ್ದಾರೆ.

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಕೋವಿಡ್‌ ಲಸಿಕೆಯು ಅಮೆರಿಕದಲ್ಲಿ ಶೇ 85.9ರಷ್ಟು ಪರಿಣಾಮಕಾರಿಯಾಗಿರುವುದು ತಿಳಿದು ಬಂದಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿರುವ ಪ್ರಯೋಗಗಳಲ್ಲಿ ಶೇ 81.7 ಹಾಗೂ ಬ್ರೆಜಿಲ್‌ನಲ್ಲಿ ಶೇ 87.6ರಷ್ಟು ಪರಿಣಾಮಕಾರಿಯಾಗಿರುವುದು ದಾಖಲಾಗಿದೆ. ಒಟ್ಟು 39,321 ಜನರನ್ನು ಲಸಿಕೆ ಪ್ರಯೋಗಕ್ಕೆ ಒಳಪಡಿಸಲಾಗಿತ್ತು.

ಮಾರ್ಚ್‌ ಅಂತ್ಯದೊಳಗೆ ಲಸಿಕೆಯ 2 ಕೋಟಿ ಡೋಸ್‌ಗಳ ಪೂರೈಕೆ ಮಾಡುವುದಾಗಿ ಜಾನ್ಸನ್‌ ಆ್ಯಂಡ್‌ ಜಾನ್ಸನ್ ಹೇಳಿದೆ. ಜೂನ್‌ ವೇಳೆಗೆ 10 ಕೋಟಿ ಡೋಸ್‌ಗಳಷ್ಟು ಲಸಿಕೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.